ಕರಾವಳಿ ಕರ್ನಾಟಕದ ಜನಪ್ರಿಯ ಜನಪದ ಕ್ರೀಡೆಗಳಲ್ಲಿ ಒಂದಾದ ಕಂಬಳ – ಕಿರು ಪರಿಚಯ -Vishwanews24
ಕಂಬಳವು, ಕರಾವಳಿ ಕರ್ನಾಟಕದ ಜನಪದ ಕ್ರೀಡೆಗಳಲ್ಲಿ ಒಂದು. ಇದರಲ್ಲಿ ನೀರುತುಂಬಿದ ಕೆಸರುಗದ್ದೆ ಅಥವಾ ನದಿಯ ದಡದ ಮರಳುದಂಡೆಗಳ ಬದಿಯಲ್ಲಿ ಕೃತಕವಾಗಿ ನಿರ್ಮಿಸಿರುವ ಕೊಳದಲ್ಲಿ, ಕೋಣಗಳ ನಡುವೆ ಓಟದ ಪಂದ್ಯವನ್ನು ನಡೆಸಲಾಗುತ್ತದೆ. ಇದು ತುಳುಸಂಸ್ಕೃತಿಗೆ ವಿಶಿಷ್ಟವಾದ ಚಟುವಟಿಕೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಕೇರಳಕ್ಕೆ ಸೇರಿರುವ ಕಾಸರಗೋಡು ಜಿಲ್ಲೆಗಳಲ್ಲಿ ಈ ಪಂದ್ಯಗಳನ್ನು ನಡೆಸುತ್ತಾರೆ. ಕಂಬಳ ಮತ್ತು ಕೋಳಿ ಅಂಕಗಳು ನೂರಾರು ವರ್ಷಗಳಿಂದ ಈ ಸಮುದಾಯಗಳನ್ನು ಆಕರ್ಷಿಸಿವೆ. ಈಗ ಕೇವಲ ಮನರಂಜನೆಯ ಮಟ್ಟಕ್ಕೆ ಇಳಿದಿರುವ ಕಂಬಳವು ಒಂದು ಕಾಲದಲ್ಲಿ, ಸಾಮಾಜಿಕ-ಆರ್ಥಿಕ ಆಯಾಮಗಳನ್ನು ಪಡೆದ ಫಲವಂತಿಕೆಗೆ ಸಂಬಂಧಿಸಿದ ಧಾರ್ಮಿಕ ಆಚರಣೆಯಾಗಿತ್ತು. ಕಂಬಳ ಅಥವಾ ತುಳು ಭಾಷೆಯಲ್ಲಿ ಹೇಳುವಂತೆ ‘ಕಂಬುಲ’ ಎಂದರೆ ಉಳುವುದಕ್ಕೆ ಮತ್ತು ಬೀಜಗಳ ಬಿತ್ತನೆಗೆ ಸಿದ್ಧವಾಗಿರುವ ಕೆಸರುಗದ್ದೆ ಎಂದೇ ಅರ್ಥ. ಕಂಬಳ ಎಂದರೆ ಕೇವಲ ಕೋಣಗಳ ಓಟದ ಪಂದ್ಯವಲ್ಲ. ಅದಕ್ಕೆ ಸಂಬಂಧಿಸಿದ ಅನೇಕ ಆಚರಣೆಗಳಿವೆ.

ಕರಾವಳಿಯ ರೈತಾಪಿ ಜನರು ಭತ್ತದ ಕೊಯಿಲಿನ ನಂತರ ತಮ್ಮ ಮನರಂಜನೆಗೋಸ್ಕರ ಏರ್ಪಡಿಸುತ್ತಿದ್ದ ಈ ಕ್ರೀಡೆ ಕಳೆದ ಅನೇಕ ವರ್ಷಗಳಿಂದ ಸಾಂಘಿಕ ಬಲದೊಂದಿಗೆ ಬೆಳೆಯುತ್ತಿದೆ. ಈ ಕ್ರೀಡೆಯಲ್ಲಿ ಮುಖ್ಯವಾಗಿ ಎರಡು ಕೋಣಗಳ ಕುತ್ತಿಗೆಗೆ ಹಗ್ಗ ಕಟ್ಟಿ ಅವುಗಳನ್ನು ಓಡಿಸಲಾಗುತ್ತದೆ. ಇಲ್ಲಿ ಕೋಣಗಳೊಂದಿಗೆ ಅವುಗಳನ್ನು ಓಡಿಸುವಾತನ ಪಾತ್ರವೂ ಮುಖ್ಯ. ಕಂಬಳಕ್ಕೆ ನೂರಾರು ವರ್ಷಗಳ ಇತಿಹಾಸವಿದೆ ಎಂದು ಹೇಳಲಾಗಿದೆ. ಹಿಂದಿನ ಕಾಲದಲ್ಲಿ ರಾಜರುಗಳ ಬೆಂಬಲ ಮತ್ತು ಪ್ರೋತ್ಸಾಹದೊಂದಿಗೆ ಈ ಕ್ರೀಡೆ ನಡೆಯುತ್ತಿತ್ತು. ಭತ್ತದ ಮೊದಲ ಕೊಯಿಲಿನ ನಂತರ ಸಾಮಾನ್ಯವಾಗಿ ಈ ಕ್ರೀಡೆ ಆಯೋಜಿಸಲ್ಪಡುತ್ತದೆ. ಮನರಂಜನೆಯ ಮುಖ್ಯ ಉದ್ದೇಶದಿಂದ ಪ್ರಾರಂಭಾವದ ಈ ಜನಪದ ಕ್ರೀಡೆ ಇತ್ತೀಚೆಗೆ ಸ್ಪರ್ಧಿಸುವುದೂ, ಅದರಲ್ಲಿ ವಿಜಯಿಯಾಗುವುದೂ ಪ್ರತಿಷ್ಠೆಯ ಸಂಕೇತವೆಂಬಂತೆ ಪರಿವರ್ತಿತವಾಗಿದೆ. ಹಿಂದೆ ಈ ಕ್ರೀಡೆಯಲ್ಲಿ ಗೆದ್ದವರಿಗೆ ತೆಂಗುಗಳು ಹಾಗೂ ಇತರೆ ಬೆಳೆಗಳನ್ನು ಬಹುಮಾನವಾಗಿ ನೀಡಲಾಗುತ್ತಿತ್ತು. ಆದರೆ ಇಂದು ಇದೊಂದು ಪ್ರತಿಷ್ಠೆಯ ಕ್ರೀಡೆಯಾಗಿದ್ದು, ಬಂಗಾರ, ಬೆಳ್ಳಿ ನಾಣ್ಯಗಳು ಹಾಗೂ ನಗದು ಹಣವನ್ನೂ ಸಹ ಬಹುಮಾನವಾಗಿ ನೀಡಲಾಗುತ್ತದೆ.
ಸಾಮಾನ್ಯವಾಗಿ ಕಂಬಳವು ಬಿಡುವಾದ ಅಥವಾ ಖಾಲಿಬಿದ್ದ ಗದ್ದೆಗಳಲ್ಲಿ ನಡೆಯುತ್ತದೆ. ಆದರೆ ಇತ್ತೀಚೆಗೆ ಇದಕ್ಕಾಗಿಯೇ ಪ್ರತ್ಯೇಕವಾದ ಕಣಗಳನ್ನು ನಿರ್ಮಿಸಲಾಗಿದೆ. ಕಂಬಳದ ಓಟದ ಉದ್ದವು ಸುಮಾರು ನೂರರಿಂದ ಇನ್ನೂರು ಮೀಟರುಗಳಷ್ಟಿರುತ್ತದೆ. ಹಸನಾದ ಗದ್ದೆಯ ಮಣ್ಣಿನೊಂದಿಗೆ ಜಿಗುಟಾಗದಿರಲು ಅಗತ್ಯವಾದಷ್ಟು ಮರಳು ಸೇರಿಸಿ ಅದರ ಮೇಲೆ ನೀರು ಹಾಯಿಸಿ ಕೆಸರುಗದ್ದೆಯನ್ನಾಗಿ ಮಾಡಲಾಗಿರುತ್ತದೆ. ಕಂಬಳದ ಕಣವು ನೆಲ ಮಟ್ಟಕ್ಕಿಂತ ಕೆಲವು ಆಡಿಗಳಷ್ಟು ಆಳದಲ್ಲಿ ಇರುತ್ತದೆ. ಕಣದ ಒಂದು ಕೊನೆಯಲ್ಲಿ ಒಂದು ಬದಿಯಿಂದ ಇಳಿಜಾರಾಗಿ ಕಣದೊಳಕ್ಕೆ ಕೋಣಗಳನ್ನು ಇಳಿಸಲು ದಾರಿ ಇರುತ್ತದೆ. ಈ ಜಾಗದಲ್ಲಿ ಮೇಲೆ ಮಾವಿನ ಎಲೆಗಳ ತೋರಣವನ್ನು ಕಟ್ಟಲಾಗಿರುತ್ತದೆ ಹಾಗೂ ಓಟದ ಆರಂಭದ ಗೆರೆಯನ್ನು ಸೂಚಿಸುತ್ತದೆ. ಕಣದ ಮತ್ತೊಂದು ಇದೇ ರೀತಿಯ ಮಾವಿನ ತೋರಣವಿದ್ದು ಇದು ಮುಕ್ತಾಯದ ಗೆರೆಯನ್ನು ಸೂಚಿಸುತ್ತದೆ. ಮುಕ್ತಾಯದ ಗೆರೆಯ ಕೊಂಚ ಹಿಂದೆ ಏರಿಯೊಂದನ್ನು ನಿರ್ಮಿಸಲಾಗಿರುತ್ತದೆ. ಇದನ್ನು ಮಂಜೊಟ್ಟಿ ಎಂದು ಕರೆಯಲಾಗುತ್ತದೆ. ಪ್ರಾರಂಭದಿಂದ ವೇಗವಾಗಿ ಓಡಿಬರುವ ಕೋಣಗಳು ಈ ಮಂಜೊಟ್ಟಿಯನ್ನು ಏರುತ್ತ ವೇಗವನ್ನು ಕಳೆದುಕೊಂಡು ನಿಧಾನವಾಗಿ ನಿಲ್ಲುತ್ತವೆ.

ಕಂಬಳಗಳು ನವೆಂಬರ್ ಮತ್ತು ಮಾರ್ಚ್ ತಿಂಗಳುಗಳ ನಡುವಿನ ಅವಧಿಯಲ್ಲಿ ನಡೆಯುತ್ತವೆ. ಕಂಬಳದಲ್ಲಿ ‘ಬಾರೆ ಕಂಬಳ’, ‘ಪೂಕರೆ ಕಂಬಳ’, ‘ಅರಸು ಕಂಬಳ’ ಮತ್ತು ಈಗ ನಡೆಯುತ್ತಿರುವ ‘ಆಧುನಿಕ ಕಂಬಳ’ ಎಂಬ ನಾಲ್ಕು ಬಗೆಗಳನ್ನು ಗುರುತಿಸಬಹುದು. ಬಾರೆ ಕಂಬಳ ಮತ್ತು ಪೂಕರೆ ಕಂಬಳಗಳಲ್ಲಿ ಕೋಣಗಳ ಪಂದ್ಯಕ್ಕಿಂತ, ಇತರ ಆಚರಣೆಗಳಿಗೆ ಹೆಚ್ಚಿನ ಮಹತ್ವವಿದೆ. ಬಾರೆಕಂಬಳದಲ್ಲಿ, ಗದ್ದೆಯ ನಡುವೆ ಒಂದು ಬಾಳೆಯ ಗಿಡವನ್ನು ನೆಡುವುದೇ ಬಹಳ ಮುಖ್ಯ. ಕೋಣಗಳ ಓಟ ಕೇವಲ ಸಾಂಕೇತಿಕವಾದುದು. ಅರಸು ಕಂಬಳದಲ್ಲಿ ಆಚರಣೆಗಳು ಮತ್ತು ಪಂದ್ಯ ಎರಡಕ್ಕೂ ಸಮಾನ ಮಹತ್ವವಿದೆ. ಆಧುನಿಕ ಕಾಲದಲ್ಲಿ, ಆಚರಣೆಗಳು ಹಿನ್ನೆಲೆಗೆ ಸರಿದು, ಪಂದ್ಯಕ್ಕೆ ಇನ್ನಿಲ್ಲದ ಮಹತ್ವ ಬಂದಿದೆ.
ಕಂಬಳಕ್ಕೆ ಸಂಬಂಧಿಸಿದ ಆಚರಣೆಗಳು, ಅದಕ್ಕಾಗಿ ನಿಗದಿ ಪಡಿಸಿರುವ ದಿನಕ್ಕಿಂತ, ಕೆಲವು ದಿನಗಳು ಮುಂಚಿತವಾಗಿಯೇ ಪ್ರಾರಂಭವಾಗಿ, ಅದು ಮುಗಿದ ನಂತರವೂ ಮುಂದುವರಿಯುತ್ತವೆ. ಹಳ್ಳಿಯ ಹಿರಿಯರನ್ನು ಕಂಬಳಕ್ಕೆ ಆಹ್ವಾನಿಸುವುದು, ಕಂಬಳದ ಗದ್ದೆಯನ್ನು ಅಲಂಕರಿಸುವುದು, ಬೇರೆ ಬೇರೆ ಜಾನಪದ ದೈವಗಳನ್ನು ಪೂಜಿಸುವುದು, ಡೋಲು ಕುಣಿತ, ಕೊರಗ ಮತ್ತು ಮುಂಡಾಲ ಜಾತಿಗಳಿಗೆ ಸೇರಿದವರು ಹಾಡುವ ಹಾಡುಗಳು ಮತ್ತು ಕೋಣಗಳ ಮೆರವಣಿಗೆ ಇವೆಲ್ಲವನ್ನೂ ವಿಜೃಂಭಣೆಯಿಂದ ಆರಾಧನೆಯ ಹಾಗೆ ನಡೆಸಲಾಗುವುದು.
ಕಂಬಳ ಓಟದ ವಿಧಗಳು
ಕೋಣಗಳ ಓಟದ ಪಂದ್ಯವನ್ನು ನಡೆಸುವ ವಿಧಾನವನ್ನು ಅವಲಂಬಿಸಿ ಕಂಬಳದಲ್ಲಿ ಮತ್ತೆ ನಾಲ್ಕು ಬಗೆಗಳಿವೆ. ಹಗ್ಗದ ಓಟ, ಅಡ್ಡಹಲಗೆ ಓಟ, ನೇಗಿಲ ಓಟ ಮತ್ತು ಕಣೆ ಹಲಗೆ ಓಟ ಎಂಬ ಹೆಸರುಗಳಿಂದ ಅವುಗಳನ್ನು ಕರೆಯುತ್ತಾರೆ.
ಹಗ್ಗದ ಓಟದಲ್ಲಿ, ಕೋಣಗಳು ಒಂದು ನೊಗವನ್ನು ಕಟ್ಟಿಕೊಂಡು ಓಡುತ್ತವೆ. ಆ ನೊಗದ ಮಧ್ಯಕ್ಕೆ ಕಟ್ಟಿದ ಹಗ್ಗಗಳನ್ನು ಹಿಡಿದುಕೊಂಡಿರುವ ಮನುಷ್ಯನು ಕೋಣಗಳ ಸಂಗಡ ತಾನೂ ಓಡುತ್ತಾನೆ.
ಅಡ್ಡ ಹಲಗೆ ಓಟದಲ್ಲಿ ಆ ಮನುಷ್ಯನು, ನೊಗಕ್ಕೆ ಸೇರಿಸಿರುವ ಹಲಗೆಯ ಮೇಲೆ ನಿಂತುಕೊಂಡು ಕೋಣಗಳ ಓಟವನ್ನು ನಿಯಂತ್ರಿಸುತ್ತಾನೆ.
ನೇಗಿಲ ಓಟದಲ್ಲಿ ನೊಗದ ಜಾಗದಲ್ಲಿ ನೇಗಿಲು ಇರುತ್ತದೆ. ಇಲ್ಲಿ ಸಾರಥಿಯು ನೇಗಿಲನ್ನು ಹಿಡಿದಿರುತ್ತಾನೆ. ಆ ನೇಗಿಲಿಗೆ ಕೋಣಗಳನ್ನು ಕಟ್ಟಿರುತ್ತಾರೆ. ಈ ಮೂರು ಪ್ರಭೇದಗಳಲ್ಲಿ, ‘ಮಂಜೊಟ್ಟಿ’ಯನ್ನು (ಪಂದ್ಯದ ಹಾದಿಯ ಕೊನೆ ಬಿಂದು), ಮೊದಲು ತಲುಪುವ ಕೋಣಗಳ ಜೋಡಿಯನ್ನು ವಿಜಯಿಯೆಂದು ಘೋಷಿಸಲಾಗುವುದು.
‘ಕಣೆ ಹಲಗೆ ಓಟ’ದಲ್ಲಿ ಪಂದ್ಯದಲ್ಲಿ ಗೆಲ್ಲುವ ಜೋಡಿಯನ್ನು ನಿರ್ಧರಿಸುವ ವಿಧಾನ ಬೇರೆ. ಕಂಬಳದ ಗದ್ದೆಯ ಎರಡೂ ಬದಿಗಳಲ್ಲಿ, ನೆಲಮಟ್ಟದಿಂದ ಸುಮಾರು ಎರಡು ಮೀಟರುಗಳ ಎತ್ತರದಲ್ಲಿ, ಅಗಲವಾದ ಬಟ್ಟೆ ಅಥವಾ ಮರದ ಹಲಗೆಗಳನ್ನು ಕಟ್ಟಿರುತ್ತಾರೆ. ಇವುಗಳನ್ನು ‘ನಿಶಾನೆ’ ಎಂದು ಕರೆಯುತ್ತಾರೆ. ಕೋಣಗಳು ಓಡುವಾಗ, ನೀರು ಮತ್ತು ಕೆಸರುಗಳ ಮಿಶ್ರಣವು ಎಗರುವ ಎತ್ತರವನ್ನು ಪರಿಗಣಿಸಿ, ಗೆಲ್ಲುವ ಜೋಡಿಯನ್ನು ತೀರ್ಮಾನಿಸುತ್ತಾರೆ. ಪಂದ್ಯದಲ್ಲಿ ಗೆದ್ದ ಜೋಡಿಯ ಒಡೆಯರಿಗೆ ಬಂಗಾರದ ಪದಕ ಮತ್ತು ಷೀಲ್ಡುಗಳನ್ನು ಬಹುಮಾನವಾಗಿ ಕೊಡುತ್ತಾರೆ.
ಕಂಬಳ ಗದ್ದೆ :

ಒಂಟಿ ಗದ್ದೆಯ ಕಂಬಳ
ಜೋಡಿ ಗದ್ದೆಯ (ಜೋಡುಕರೆ) ಕಂಬಳ
ಜೋಡುಕರೆ ಕಂಬಳಗಳಲ್ಲಿ ಅಕ್ಕ-ಪಕ್ಕ ಎರಡು ಕಣಗಳಿದ್ದು ಎರಡರಲ್ಲೂ ಏಕಕಾಲಕ್ಕೆ ಕೋಣಗಳನ್ನು ಓಡಿಸಿ ಅವುಗಳ ಮಧ್ಯೆ ಸ್ಪರ್ಧೆ ನಡೆಸಲಾಗುತ್ತದೆ. ಕೆನೆ ಹಲಗೆ ಪಂದ್ಯವನ್ನು ಒಂದೇ ಕಣದಲ್ಲಿ ನಡೆಸಲಾಗುತ್ತದೆ ಏಕೆಂದರೆ ಇದರಲ್ಲಿ ಓಡುವ ವೇಗದ ಬದಲಿಗೆ ಓಡುವಾಗ ಕೆಸರು ಚಿಮ್ಮುವ ಎತ್ತರದ ಆಧಾರದ ಮೇಲೆ ಸ್ಪರ್ಧೆ ನಡೆಯುವುದರಿಂದ. ಹೆಚ್ಚಾಗಿ ಜೋಡುಕರೆ ಕಂಬಳಗಳಿಗೆ ಪುರಾಣ, ಜಾನಪದದಲ್ಲಿ ಸಿಗುವ ಅವಳಿ-ಜವಳಿಗಳ ಅಥವಾ ಜೋಡಿಗಳ ಹೆಸರಿಡುವುದು ಸಾಮಾನ್ಯ.
ಕೆಲವು ಜೋಡುಕರೆ ಕಂಬಳಗಳ ಹೆಸರು ಹೀಗಿವೆ:
- ಸೂರ್ಯ-ಚಂದ್ರ (ವೇಣೂರು, ಶಿರ್ವ, ಬಾರಾಡಿ, ಬಂಗಾಡಿ, ತಲಪಾಡಿ)
- ಮೂಡು-ಪಡು (ಮುಲ್ಕಿ, ಕಟಪಾಡಿ)
- ಲವ-ಕುಶ (ಮಿಯಾರು)
- ಜಯ-ವಿಜಯ (ಈದು, ಜಪ್ಪಿನಮೊಗರು)
- ವಿಜಯ-ವಿಕ್ರಮ (ಉಪ್ಪಿನಂಗಡಿ)
- ವೀರ-ವಿಕ್ರಮ (ಹೊಕ್ಕಾಡಿಗೋಳಿ)
- ಕೋಟಿ-ಚೆನ್ನಯ (ಮೂಡುಬಿದಿರೆ,ಪುತ್ತೂರು)
- ಕಾಂತಬಾರೆ-ಬೂದಬಾರೆ (ಐಕಳ)
- ಮತ್ಸ್ಯೇಂದ್ರನಾಥ-ಗೋರಕನಾಥ (ಕದ್ರಿ)
- ಕ್ಷೇತ್ರಪಾಲ-ನಾಗರಾಜ (ಆಲ್ತಾರು)
- ನೇತ್ರಾವತಿ-ಫಲ್ಗುಣಿ (ಪಿಲಿಕುಳ)
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹಲವಾರು ಕಂಬಳದ ಗದ್ದೆಗಳಿವೆ. ಕದ್ರಿ, ಮಿಯಾರು, ಮೂಡುಬಿದಿರೆ ಅವುಗಳಲ್ಲಿ ಪ್ರಮುಖವಾದವು.
ಕಂಬಳಗಳು ಕರಾವಳಿ ಕರ್ನಾಟಕದ ಸಾಂಸ್ಕೃತಿಕ ಬದುಕಿನ ಅವಿಭಾಜ್ಯ ಅಂಗಗಳಾಗಿ ಮುಂದುವರಿದಿವೆ.

