ಕರಾವಳಿಯಲ್ಲಿ ಮೋದಿ ಪ್ರಚಾರ..
ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆಯೇ ಬಿಜೆಪಿಯ ಹೈಕಮಾಂಡ್ ಪ್ರಚಾರ ತಂತ್ರ ರೂಪಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಕರೆ ತರಲು ಸಜ್ಜಾಗಿದೆ.
ರಾಜ್ಯದಲ್ಲಿ 16 ಚುನಾವಣಾ ರ‌್ಯಾಲಿಗಳಲ್ಲಿ ಪ್ರಧಾನಿ ಮಾತನಾಡಲಿದ್ದಾರೆ. ಅದರಂತೆ ಮೇ 8ರಂದು ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ತಿಳಿದುಬಂದಿದೆ.
ಏಪ್ರಿಲ್ 29ರಿಂದ ಅವರು ರಾಜ್ಯದಲ್ಲಿ ಪ್ರಚಾರ ಕಾರ್ಯ ಕೈಗೊಳ್ಳಲಿದ್ದಾರೆ. ಕೋಲಾರ ಹಾಗೂ ರಾಯಚೂರಿನಲ್ಲಿ 29, ಮೇ 1ರಂದು ಬಳ್ಳಾರಿ ಹಾಗೂ ಬೆಳಗಾವಿ, 3ರಂದು ಚಾಮರಾಜನಗರ ಹಾಗೂ ಉಡುಪಿ, 5ರಂದು ಜಮಖಂಡಿ, 6ರಂದು ಹುಬ್ಬಳ್ಳಿ ಹಾಗೂ ಕಲಬುರ್ಗಿ, 7ರಂದು ಶಿವಮೊಗ್ಗ ತುಮಕೂರು ಮತ್ತು 8ರಂದು ಮಂಗಳೂರು, ಬೆಂಗಳೂರಿನಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ ಎಂಬ ಮಾಹಿತಿ ಇದೆ.
ಆದರೆ ಜಿಲ್ಲಾ ಬಿಜೆಪಿ ನಾಯಕರ ಪ್ರಕಾರ ಆಯ್ದ 4-5 ವಿಧಾನಸಭಾ ಕ್ಷೇತ್ರಗಳ ಪ್ರಮುಖ ಭಾಗಗಳಲ್ಲಿ ಮೋದಿ ರೋಡ್ ಶೋ ನಡೆಸುವ ಸಾಧ್ಯತೆ ಇದೆ. ಸಾರ್ವಜನಿಕ ಸಭೆಯಾದರೆ ಹೆಚ್ಚು ಜನರನ್ನು ಸೇರಿಸುವ, ಹೆಚ್ಚಿನ ಭದ್ರತೆ ವ್ಯವಸ್ಥೆ ಮಾಡುವ ಸವಾಲು ಇರುತ್ತದೆ, ರೋಡ್ ಶೋದಲ್ಲಿ ಜನರನ್ನು ನೇರವಾಗಿ ತಲಪುವ ಸಾಧ್ಯತೆ ಹೆಚ್ಚು ಎಂಬ ಕಾರಣಕ್ಕೆ ಇದಕ್ಕೆ ಒತ್ತು ನೀಡಬಹುದು. ಆದರೆ ಜಿಲ್ಲಾ ಬಿಜೆಪಿ ನಾಯಕರಿಗೆ ಅಧಿಕೃತವಾದ ಯಾವುದೇ ಕಾರ್ಯಕ್ರಮ, ವೇಳಾಪಟ್ಟಿ ಲಭ್ಯವಾಗಿಲ್ಲ.
