ಕರ್ನಾಟಕ ಬಂದ್ : ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ – Vishwanews24
ಕರ್ನಾಟಕ ಬಂದ್ : ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ
ಮಂಗಳೂರು: ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುತ್ತಿರುವ ವಿಚಾರವಾಗಿ ಕನ್ನಡ ಪರ ಸಂಘಟನೆಗಳು ಸೇರಿದಂತೆ ರಾಜ್ಯಾದ್ಯಂದ ಶುಕ್ರವಾರ ಬಂದ್ ನಡೆಸುತ್ತಿವೆ. ಆದರೆ ಕರಾವಳಿ ಭಾಗ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಂದ್ ನಿಂದ ಹಲವು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ಥಗೊಂಡಿದ್ದು, ಕರಾವಳಿಯಲ್ಲಿ ಬಂದ್ ಗೆ ನೇರವಾಗಿ ಇಂಗಿತ ವ್ಯಕ್ತವಾಗಿಲ್ಲ. ನೈತಿಕ ಬೆಂಬಲವಷ್ಟೇ ನೀಡಿದ್ದು, ಹೀಗಾಗಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ಗಳು ಎಂದಿನಂತೆ ಓಡಾಟ ನಡೆಸುತ್ತಿದೆ.
ಮಂಗಳೂರಿನಲ್ಲಿ ಎಲ್ಲಾ ಹೋಟೆಲ್, ಪೆಟ್ರೋಲ್ ಬಂಕ್ಗಳು ತೆರೆದಿದ್ದು, ಎಲ್ಲಾ ಉದ್ಯಮಗಳೂ ಎಂದಿನಂತೆ ನಡೆಯುತ್ತಿವೆ. ಕರ್ನಾಟಕ ಬಂದ್ ಇದ್ದರೂ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿಲ್ಲ. ಸರ್ಕಾರಿ ಕಚೇರಿಗಳು ಕೂಡಾ ಎಂದಿನಂತೆ ನಿರ್ವಹಿಸುತ್ತಿವೆ. ಜನರ ನಿತ್ಯದ ವಹಿವಾಟುಗಳು ಮುಂಜಾನೆಯಿಂದಲೇ ಆರಂಭವಾಗಿವೆ.
ಕರಾವಳಿ ಹೋಟೆಲ್ ಉದ್ಯಮವು ಕರ್ನಾಟಕ ಬಂದ್ಗೆ ನೈತಿಕ ಸೂಚಿಸಿದ ಹಿನ್ನಲೆಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಜನ ಜೀವನ ಎಂದಿನಂತೆ ಇರಲಿದೆ.
ಕಾವೇರಿ ವಿಚಾರವಾಗಿ ನಮಗೆ ಸಹಾನುಭೂತಿಯಿದ್ದು ಆದರೆ ಬಂದ್ ನಿಂದ ಸಾರ್ವಜನಿಕರಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಬಸ್ ಸಂಚಾರ ಬಂದ್ ಮಾಡುವುದರಿಂದ ವಿದ್ಯಾರ್ಥಿಗಳು, ಉದ್ಯೋಗಿಗಳು ಸೇರಿ ಸಾರ್ವಜನಿಕ ಜೀವನಕ್ಕೆ ಕಷ್ಟವಾಗಲಿದೆ ಬಸ್ ಓಡಾಟ ಎಂದಿನಂತೆ ಇರಲಿದೆ ಎಂದು ಖಾಸಗಿ ಬಸ್ ಒಕ್ಕೂಟ ತಿಳಿಸಿದೆ.
