ಕರ್ನಾಟಕ್ಕೆ ಪ್ರತ್ಯೇಕವಾದ ನಾಡ ಧ್ವಜದ ಅಗತ್ಯವಿಲ್ಲ, ನಮಗೆ ರಾಷ್ಟ್ರ ಧ್ವಜ ಒಂದೇ ಸಾಕು : ಸಿ.ಟಿ.ರವಿ -Vishwanews24
ಬೆಂಗಳೂರು :ಕರ್ನಾಟಕ್ಕಕ್ಕೆ ಪ್ರತ್ಯೇಕ ನಾಡ ಧ್ವಜಬೇಕು ಎಂಬ ವಿಚಾರ ಪ್ರಚಲಿತದಲ್ಲಿದ್ದು, ಇದಕ್ಕೆ ಸಂಬಂಧಿಸಿದಂತೆ ರಾಜ್ಯಕ್ಕೆ ಪ್ರತ್ಯೇಕವಾದ ನಾಡಧ್ವಜದ ಅಗತ್ಯ ಇಲ್ಲ, ಅದರ ಬದಲು ರಾಷ್ಟ್ರ ಧ್ವಜ ಒಂದೇ ಸಾಕು ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ಕಳೆದ ಐದು ದಶಕದಿಂದ ರಾಜ್ಯದಲ್ಲಿ ಪ್ರತ್ಯೇಕ ನಾಡ ಧ್ವಜ ಬಳಕೆಯಲ್ಲಿದೆ. ಆದರೆ, ಇದಕ್ಕೆ ಅಧಿಕೃತ ಮಾನ್ಯತೆ ಇರಲಿಲ್ಲ. ಬದಲಾಗಿ ಸಾಂಸ್ಕೃತಿಕ ಬಿಂಬಕವಾಗಿ ಚಳುವಳಿ ಹಾಗೂ ಇತರ ಕನ್ನಡ ಪರ ಕಾರ್ಯಕ್ರಮಗಳಲ್ಲಿ ಈ ಧ್ವಜವನ್ನು ಬಳಕೆ ಮಾಡಲಾಗುತ್ತಿತ್ತು. ಹೀಗಾಗಿ ಕಳೆದ ಬಾರಿಯ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕೃತ ಧ್ವಜ ವಿನ್ಯಾಸಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ತಂಡವೊಂದನ್ನು ರಚನೆ ಮಾಡಿತ್ತು. ಈ ತಂಡದ ಶಿಫಾರಸ್ಸಿನ ಮೇರೆ ಹಳದಿ ಬಿಳಿ ಹಾಗೂ ಕೆಂಪು ಬಣ್ಣದ ಧ್ವಜದ ಮಧ್ಯಭಾಗದಲ್ಲಿ ರಾಜ್ಯ ಲಾಂಛನ ಗಂಡಭೇರುಂಡ ಇರುವ ಹಾಗೆ ಧ್ವಜವನ್ನು ವಿನ್ಯಾಸ ಮಾಡಲಾಗಿತ್ತು. ಅಲ್ಲದೆ, ಈ ಧ್ವಜಕ್ಕೆ ರಾಜ್ಯದ ಅಧಿಕೃತ ನಾಡ ಧ್ವಜ ಎಂಬ ಮಾನ್ಯತೆ ನೀಡಬೇಕು ಎಂದು ರಾಜ್ಯ ಸರ್ಕಾರ ಕೇಂದ್ರದ ಎದುರು ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಈವರೆಗೆ ಕೇಂದ್ರ ಸರ್ಕಾರ ರಾಜ್ಯದ ಪ್ರಸ್ತಾವನೆಯನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಅಲ್ಲದೆ, ಈ ಧ್ವಜಕ್ಕೆ ಮಾನ್ಯತೆಯೂ ನೀಡಿಲ್ಲ.
ಬಾವುಟದ ವಿಚಾರವಾಗಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಿ.ಟಿ. ರವಿ, “ನಾಡಧ್ವಜವನ್ನು ಸಾಂಸ್ಕೃತಿಕ ಸಂಕೇತವಾಗಿ ಬಳಸಲು ಅವಕಾಶವಿದೆಯೇ ಹೊರತು ಸಾಂವಿಧಾನಾತ್ಮಕವಾಗಿ ಬಳಸಲು ಅವಕಾಶವಿಲ್ಲ. ಹಾಗಾಗಿ ಇಡೀ ರಾಷ್ಟ್ರಕ್ಕೆ ಒಂದೇ ತ್ರಿವರ್ಣ ಧ್ವಜ ಮಾತ್ರ ಬಳಕೆ ಮಾಡಲು ಧ್ವಜ ಸಂಹಿತೆಯಲ್ಲಿ ಅವಕಾಶ ಇದೆ,” ಎಂದು ಹೇಳುವ ಮೂಲಕ ಪ್ರತ್ಯೇಕ ಕನ್ನಡ ನಾಡ ಧ್ವಜ ಪ್ರಸ್ತಾವನೆಯನ್ನು ಸರ್ಕಾರ ಪರೋಕ್ಷವಾಗಿ ತಳ್ಳಿಹಾಕಿರುವುದನ್ನು ತಿಳಿಸಿದ್ದಾರೆ.
ಅವರ ಈ ಹೇಳಿಕೆ ಕನ್ನಡಪರ ಸಂಘಟನೆ ಸೇರಿದಂತೆ ಇದೀಗ ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ.
