ಕಾಪು: ಜಿಲ್ಲಾಧಿಕಾರಿಗಳಿಂದ ಕಡಲ್ಕೊರೆತ ಪರಿಶೀಲನೆ: ತುರ್ತು ಕಾಮಗಾರಿಗೆ 2 ಕೋ. ರೂ. ಬಿಡುಗಡೆ – vishwanews24

Featured, ಉಡುಪಿ

ಕಾಪು: ಜಿಲ್ಲಾಧಿಕಾರಿಗಳಿಂದ ಕಡಲ್ಕೊರೆತ ಪರಿಶೀಲನೆ: ತುರ್ತು ಕಾಮಗಾರಿಗೆ 2 ಕೋ. ರೂ. ಬಿಡುಗಡೆ

ಉಡುಪಿ: ತಾಲೂಕಿನಲ್ಲಿ ಕಡಲ್ಕೊರೆತದಿಂದ ಹಾನಿಗೊಳಗಾಗಿರುವ ಹೆಜಮಾಡಿ, ಪಡುಬಿದ್ರಿ, ಎರ್ಮಾಳು, ಕಾಪು, ಪೊಲಿಪು ಹಾಗೂ ಕಟಪಾಡಿ-ಮಟ್ಟು ಪ್ರದೇಶಗಳಿಗೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಹಾಗೂ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಹಾನಿ ಪರಿಶೀಲನೆ ನಡೆಸಿದರು. ಸ್ಥಳೀಯರಿಂದ ಸಮಸ್ಯೆಗಳು ಹಾಗೂ ತತ್‌ಕ್ಷಣದ ಪರಿಹಾರದ ಅಗತ್ಯದ ಕುರಿತು ಮಾಹಿತಿ ಪಡೆದರು.

ಬಳಿಕ ಜಿಲ್ಲಾಧಿಕಾರಿ ಮಾತನಾಡಿ, ಕಾಪು ಕ್ಷೇತ್ರದ 8-9 ಕಡಲ್ಕೊರೆತ ಪ್ರದೇಶಗಳನ್ನು ಪರಿಶೀಲಿಸಿದ್ದು, ಅಗತ್ಯವಿರುವಲ್ಲಿ ತುರ್ತು ಕಾಮಗಾರಿ ಕೈಗೊಳ್ಳುವಂತೆ ಬಂದರು ಇಲಾಖೆಗೆ ಸೂಚನೆ ನೀಡಲಾಗಿದೆ. ಈ ಕಾಮಗಾರಿಗಾಗಿ ಕೂಡಲೇ 2 ಕೋಟಿ ರೂ. ಬಿಡುಗಡೆ ಮಾಡಲಾಗುತ್ತಿದ್ದು, ಕಾಮಗಾರಿಯನ್ನು ಶೀಘ್ರ ಆರಂಭಿಸಲಾಗುವುದು ಎಂದರು.

ಶಾಶ್ವತ ಪರಿಹಾರಕ್ಕಾಗಿ ಸರಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಚೆನ್ನೈ ಮೂಲದ ತಜ್ಞ ಸಂಸ್ಥೆಯೊಂದಿಗೆ ಸಮಾಲೋಚನೆ ನಡೆಯುತ್ತಿದೆ. ಶೋರ್‌ಲೈನ್ ಮ್ಯಾನೇಜ್‌ಮೆಂಟ್ ಪ್ಲಾನ್ (ಎಸ್‌ಎಂಪಿ) ಆಧಾರದಲ್ಲಿ ತಜ್ಞರ ಸಲಹೆಯಂತೆ ಸೂಕ್ತ ಮಾದರಿಯ ಶಾಶ್ವತ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಹೇಳಿದರು.

ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಕಾಪು ಕ್ಷೇತ್ರದ ವಿವಿಧ ಭಾಗಗಳಲ್ಲಿ ಕಡಲ್ಕೊರೆತ ತೀವ್ರಗೊಂಡು ಕರಾವಳಿ ನಿವಾಸಿಗಳು ಆತಂಕದಲ್ಲಿದ್ದಾರೆ. ಶಾಶ್ವತ ಪರಿಹಾರಕ್ಕಾಗಿ ಸುಮಾರು 100 ಕೋಟಿ ರೂ. ವೆಚ್ಚದ ಯೋಜನೆ ಸಿದ್ಧಗೊಂಡಿದ್ದು, ಈ ಕುರಿತು ವಿಧಾನಸಭೆಯ ಅಧಿವೇಶನದಲ್ಲಿಯೂ ಪ್ರಸ್ತಾವಿಸಲಾಗಿದೆ ಎಂದರು.

ಮಂಗಳೂರು : ಆಳಸಮುದ್ರ ಮೀನುಗಾರಿಕೆ ಆರಂಭ; ಮಲ್ಪೆಯಲ್ಲಿ ಕಡಲಿಗಿಳಿಯದ ದೋಣಿಗಳು – vishwanews24

Leave a Reply

error: Content is protected !!