ಕಾಪು : ‘ಪಾದೂರು ಉಳಿಸಿ’ ಹೋರಾಟ ರಾಜಕೀಯ ಪ್ರೇರಿತ: ಬಿಜೆಪಿ ಆರೋಪ – vishwanews24
ಕಾಪು : ‘ಪಾದೂರು ಉಳಿಸಿ’ ಹೋರಾಟ ರಾಜಕೀಯ ಪ್ರೇರಿತ: ಬಿಜೆಪಿ ಆರೋಪ
ಕಾಪು : ಪಾದೂರಿನಲ್ಲಿರುವ ಭೂಗತ ತೈಲಾಗಾರದ ಎರಡನೇ ಹಂತದ ವಿಸ್ತರಣೆ ಮತ್ತು ಗುತ್ತಿಗೆ ವಹಿಸಿಕೊಂಡಿರುವ ಮೇಘಾ ಎಂಜಿನಿಯರಿಂಗ್ ಕಂಪೆನಿಯ ವಿರುದ್ಧ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ನೇತೃತ್ವದಲ್ಲಿ ಪಾದೂರು ಉಳಿಸಿ ಪರಿಸರ ರಕ್ಷಿಸಿ ಹೋರಾಟ ಸಮಿತಿ ನಡೆಸಿದ ಪ್ರತಿಭಟನೆ ಸಂಪೂರ್ಣ ರಾಜಕೀಯ ಆಧಾರಿತ ಎಂದು ಮಜೂರು ಗ್ರಾ.ಪಂ.ನ ನಿಕಟಪೂರ್ವ ಬಿಜೆಪಿ ಬೆಂಬಲಿತ ಸದಸ್ಯರು ಆರೋಪಿಸಿದರು.
ಮಜೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಸಂದೀಪ್ ರಾವ್ – ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆರಂಭದಿಂದಲೂ ಗ್ರಾಮಸ್ಥರಿಗೆ ಆಗುತ್ತಿರುವ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸಿ, ಸಮಸ್ಯೆ ಪರಿಹರಿಸುವಲ್ಲಿ ಗ್ರಾ.ಪಂ. ಪ್ರಾಮಾಣಿಕ ಪ್ರಯತ್ನ ನಡೆಸಿದೆ. ಆದರೂ ವಿನಾ ಕಾರಣ ಗ್ರಾ.ಪಂ. ವಿರುದ್ಧ ಆರೋಪ ಮಾಡುತ್ತಿರುವ ಸೊರಕೆ ಅವರು ಪ್ರತಿಭಟನೆಯ ಬೀದಿ ನಾಟಕ ನಡೆಸುತ್ತಿರುವುದು ಹಾಸ್ಯಾಸ್ಪದ ಎಂದರು.
ಮಾಜಿ ಶಾಸಕ – ಲಾಲಾಜಿ ಆರ್. ಮೆಂಡನ್, ಸಂಸದರಾಗಿದ್ದ ಶೋಭಾ ಕರಂದ್ಲಾಜೆ ಮತ್ತು ಹಾಲಿ ಶಾಸಕ ಗುರ್ಮ ಸುರೇಶ್ ಶೆಟ್ಟಿ ಅವರ ಮುತುವರ್ಜಿಯಲ್ಲಿ ಸ್ಥಳೀಯ ಜನಜಾಗೃತಿ ಹಾಗೂ ಜನಹಿತ ಸಮಿತಿ ಜತೆ ಸೇರಿಕೊಂಡು ಗ್ರಾಮಸ್ಥರಿಗಾಗುವ ತೊಂದರೆಗೆ ಸ್ಪಂದಿಸುವ ಕೆಲಸ ಮಾಡಲಾಗಿದೆ. ಕೇವಲ ಪಕ್ಷದ ಬೆಂಬಲಿಗರಿಗೆ ಗುತ್ತಿಗೆದಾರಿಕೆ ಸಿಕ್ಕಿಲ್ಲವೆಂಬ ಹತಾಶೆಯಿಂದ ಪಾದೂರು ಗ್ರಾಮಸ್ಥರೇ ಇಲ್ಲದ ಸ್ವಯಂ ಘೋಷಿತ ಸಮಿತಿಯನ್ನು ಕಟ್ಟಿಕೊಂಡು ನಡೆಸಿರುವ ಹೋರಾಟ ಅರ್ಥವಿಲ್ಲದ್ದು ಎಂದರು.
ತೆರಿಗೆ ಬಾಕಿಯಿರಿಸಿದ ಕಂಪೆನಿಯ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿ 3 ಕೋ.ರೂ. ವರೆಗೆ ತೆರಿಗೆ ಹಣವನ್ನು ವಸೂಲು ಮಾಡಿ ಅಭಿವೃದ್ಧಿ ಕಾರ್ಯಕ್ಕೆ ವಿನಿಯೋಗಿಸಲಾಗಿದೆ ಎಂದರು.
ಪ್ರಮಾಣಕ್ಕೆ ಆಹ್ವಾನ
ಕಾಪು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಅವರ ಪುತ್ರನ ವಿರುದ್ಧ ಕಲ್ಲಿನ ವ್ಯವಹಾರ ಮಾಡುತ್ತಿದ್ದಾರೆಂಬ ಸುಳ್ಳು ಆರೋಪ ಮಾಡಿರುವ ಬೈರಂಪಳ್ಳಿ ಸಂತೋಷ್ ಹಾಗೂ ವಿನಯ್ ಕುಮಾರ್ ಸೊರಕೆ ಅವರು 24 ಗಂಟೆಯೊಳಗೆ ದಾಖಲೆಗಳೊಂದಿಗೆ ಆರೋಪ ಸಾಬೀತು ಮಾಡಬೇಕು. ಇಲ್ಲದಿದ್ದಲ್ಲಿ ಕಾಪು ಮಾರಿಯಮ್ಮನ ಸನ್ನಿಧಾನದಲ್ಲಿ ಅಥವಾ ಅವರು ನಂಬುವ ಯಾವುದೇ ದೇವಸ್ಥಾನಕ್ಕೆ ಬಂದು ಆರೋಪ ಹೌದು ಎಂದು ಪ್ರಮಾಣ ಮಾಡಲಿ, ಇದಕ್ಕೆ ಶಾಸಕರನ್ನು ಕರೆತರುವ ಜವಾಬ್ದಾರಿ ನಮ್ಮದಾಗಿದೆ ಎಂದು ಸವಾಲು ಹಾಕಿದರು. ಮಜೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಸಾದ್ ಶೆಟ್ಟಿ ವಳದೂರು, ಮಾಜಿ ಅಧ್ಯಕ್ಷೆ ಶರ್ಮಿಳಾ ಆಚಾರ್ಯ, ಮಾಜಿ ಉಪಾಧ್ಯಕ್ಷರಾದ ಮಧುಸೂದನ ಸಾಲ್ಯಾನ್, ಮಂಜುಳಾ ಆಚಾರ್ಯ, ಸಹನಾ ತಂತ್ರಿ, ಮಾಜಿ ಸದಸ್ಯೆ ವನಿತಾ ಉಪಸ್ಥಿತರಿದ್ದರು.
