ಕಾಪು : ರಿಕ್ಷಾ ನಿಲ್ದಾಣ ತೆರವುಗೊಳಿಸಲು ಹೈಕೋರ್ಟ್ ಆದೇಶ ; ತೆರವಿಗೆ ಮುಂದಾದ ಪುರಸಭೆಯ ಕ್ರಮಕ್ಕೆ ರಿಕ್ಷಾ ಚಾಲಕರಿಂದ ಪ್ರತಿಭಟನೆ – vishwanews24
ಕಾಪು : ರಿಕ್ಷಾ ನಿಲ್ದಾಣ ತೆರವುಗೊಳಿಸಲು ಹೈಕೋರ್ಟ್ ಆದೇಶ ; ತೆರವಿಗೆ ಮುಂದಾದ ಪುರಸಭೆಯ ಕ್ರಮಕ್ಕೆ ರಿಕ್ಷಾ ಚಾಲಕರಿಂದ ಪ್ರತಿಭಟನೆ
ಕಾಪು ಪೇಟೆಯ ಖಾಸಗಿ ಕಟ್ಟಡವೊಂದರ ಮುಂಭಾಗದಲ್ಲಿ ಇರುವ ರಿಕ್ಷಾ ನಿಲ್ದಾಣವನ್ನು ತೆರವುಗೊಳಿಸುವಂತೆ ಹೈಕೋರ್ಟ್ ಆದೇಶಿಸಿದ್ದು ಅದರಂತೆ ಪುರಸಭೆಯು ರಿಕ್ಷಾ ನಿಲ್ದಾಣ ತೆರವಿಕೆ ಮುಂದಾಗಿದ್ದು ಪುರಸಭೆಯ ಕ್ರಮಕ್ಕೆ ರಿಕ್ಷಾ ಚಾಲಕರಿಂದ ಭಾರೀ ಆಕ್ಷೇಪ ವ್ಯಕ್ತವಾಗಿದೆ.
ಕಾಪು ಪೇಟೆಯಲ್ಲಿ ಖಾಸಗಿ ಕುಟುಂಬಕ್ಕೆ ಸೇರಿದ ಜಾಗ ಮತ್ತು ಕಟ್ಟಡದ ಮುಂಭಾಗದಲ್ಲಿರುವ ರಿಕ್ಷಾ ನಿಲ್ದಾಣದಿಂದಾಗಿ ಅಂಗಡಿಯಲ್ಲಿರುವ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಖಾಸಗಿಯವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಅವರ ಪರವಾಗಿ ತೀರ್ಪು ನೀಡಿ ರಿಕ್ಷಾ ನಿಲ್ದಾಣವನ್ನು ತೆರವುಗೊಳಿಸುವಂತೆ ಸೂಚನೆ ನೀಡಿತ್ತು.
ಇದನ್ನೂ ಓದಿ 👇
ಕಾರ್ಕಳ ಮಹಾಮಸ್ತಕಾಭಿಷೇಕ: ವಿಶೇಷ ಅನುದಾನಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಮನವಿ – vishwanews24
ಹೈಕೋರ್ಟ್ ನೀಡಿರುವ ಆದೇಶದಂತೆ ಕಾಪು ಪುರಸಭೆಯು ರಿಕ್ಷಾ ನಿಲ್ದಾಣ ತೆರವುಗೊಳಿಸುವ ವಿಚಾರದಲ್ಲಿ ಚರ್ಚಿಸಲು ಮತ್ತು ಆದೇಶ ಜಾರಿಯ ಕುರಿತಾಗಿ ರಿಕ್ಷಾ ಚಾಲಕ ಮತ್ತು ಮಾಲಕರ ಸಂಘದ ಪ್ರತಿನಿಧಿಗಳಿಗೆ ನೋಟಿಸ್ ಜಾರಿ ಮಾಡಿತ್ತು. ಏಕಾಏಕಿಯಾಗಿ ಬಂದ ಹೈಕೋರ್ಟ್ ನ ಆದೇಶದಿಂದ ಗಲಿಬಿಲಿಗೊಂಡ ಕಾಪು ಪೇಟೆಯ ಎಲ್ಲಾ ರಿಕ್ಷಾ ಚಾಲಕರು ರಿಕ್ಷಾ ಸಮೇತವಾಗಿ ಪುರಸಭೆಗೆ ಆಗಮಿಸಿ, ಮುತ್ತಿಗೆ ಹಾಕಲು ಮುಂದಾದದರು.

ಇದರಿಂದಾಗಿ ಪುರಸಭೆ ಮುಂಭಾಗ ಕ್ಷಣಕಾಲ ಗೊಂದಲ ಉಂಟಾಯಿತು. ರಿಕ್ಷಾ ನಿಲ್ದಾಣ ತೆರವು ವಿಚಾರದಲ್ಲಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಿದ್ದೇವೆ. ರಿಕ್ಷಾ ನಿಲ್ದಾಣ ತೆರವಿಗೆ ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡುವುದಿಲ್ಲ. ತೆರವು ಮಾಡುವುದು ಪುರಸಭೆಗೆ ಅನಿವಾರ್ಯವೇ ಆದರೆ ಪರ್ಯಾಯ ಪ್ರದೇಶವನ್ನು ಗುರುತಿಸಿ, ನಿಲ್ದಾಣ ರಚಿಸಿ ಕೊಟ್ಟು ತೆರವು ನಡೆಸಲಿ. ಅಷ್ಟರವರೆಗೆ ಕಾಲಾವಕಾಶ ಮಾಡಿಕೊಡುವಂತೆ ರಿಕ್ಷಾ ಚಾಲಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ 👇
ಬಂಟ್ವಾಳ : ಪಾಣೆಮಂಗಳೂರು ನೇತ್ರಾವತಿ ನದಿಯಲ್ಲಿ ಮೃತದೇಹ ಪತ್ತೆ – vishwanews24
