ಕಾರಣಿಕದ ಬೀಡು ಶ್ರೀ ಕ್ಷೇತ್ರ ಪನೋಲಿಬೈಲು ಕಲ್ಲುರ್ಟಿ ದೈವಸ್ಥಾನ : ಕ್ಷೇತ್ರದ ಕಿರುಪರಿಚಯ – Vishwanews24 

Featured, ರಾಜ್ಯ ನ್ಯೂಸ್, ವಿಶೇಷ ಲೇಖನಗಳು

ಪನೋಲಿಬೈಲು ಕ್ಷೇತ್ರ ಪರಿಚಯ

ಶ್ರೀ ಕ್ಷೇತ್ರ ಪನೋಲಿಬೈಲು ಎಂಬ ಹೆಸರನ್ನು ಕೇಳದೆ ಇರುವವರು ತೀರಾ ವಿರಳ. ಈ ಕ್ಷೇತ್ರದ ಹೆಸರಿನಲ್ಲೇ ಒಂದು ರೀತಿಯ ಭಯ ಭಕ್ತಿ. ಇದು ಕರಾವಳಿಯ ಅತ್ಯಂತ ಕಾರಣೀಕದ ದೈವಸ್ಥಾನ ಎಂಬುವುದರಲ್ಲಿ ಎರಡು ಮಾತಿಲ್ಲ. ಕ್ಷೇತ್ರದಲ್ಲಿ ಪ್ರಧಾನ ದೈವಗಳಾಗಿ ಕಲ್ಲುರ್ಟಿ ಕಲ್ಕುಡ ನೆಲೆಯಾಗಿ ಸದ್ಭಕ್ತರನ್ನು ಪೊರೆಯುತ್ತಿದ್ದಾರೆ.

ಕ್ಷೇತ್ರದ ಕಲ್ಲುರ್ಟಿ ಕಲ್ಕುಡರ ದರ್ಶನ ಪಡೆದು ಅಪೂರ್ವ ಸೌಂದರ್ಯವನ್ನು ಕಣ್ತುಂಬಿಕೊಳ್ಳಬೇಕಾದರೆ ಬಿ.ಸಿ ರೋಡ್ ಸಮೀಪದ ಮೆಲ್ಕಾರ್‌ನಿಂದ ಮಾರ್ನಬೈಲು ಮಾರ್ಗವಾಗಿ 4 ಕಿ.ಮೀ ಪ್ರಯಾಣಿಸಬೇಕು. ಹಿಂದೆ ಈ ಪ್ರದೇಶದಲ್ಲಿ ಹೇರಳವಾಗಿ ಪನೆಯ ಮರಗಳು ಹಬ್ಬಿಕೊಂಡಿತ್ತು. ಇದೇ ಕಾರಣದಿಂದ ಈ ಊರಿಗೆ ಪಣೋಲಿಬೈಲು ಎಂದು ಹೆಸರಾಯಿತು ಎಂಬ ಪ್ರತೀತಿ ಇದೆ.

ಶ್ರೀ ಕ್ಷೇತ್ರ ಪಣೋಲಿಬೈಲು 400ಕ್ಕೂ ಹೆಚ್ಚು ವರ್ಷಗಳ ಪೌರಾಣಿಕ ಕಥೆಯಿರುವ ಹಳೆಯ ದೇವಸ್ಥಾನ. ಉಪ್ಪಿನಂಗಡಿಯ ವೈಲಾಯ ಎಂಬ ವಿದ್ವಾಂಸಕನ ಕುಲ ದೇವರಾಗಿ ಬೆಳಗಿದ ಕಲ್ಲುರ್ಟಿ ಕಲ್ಕುಡರೆಂಬ ದೈವ ಶಕ್ತಿಗಳು ಶ್ರೀ ಕ್ಷೇತ್ರ ಪಣೋಲಿಬೈಲಿನಲ್ಲಿ ನೆಲೆಯಾದರು ಎಂಬುವುದು ಇಲ್ಲಿನ ಚಾರಿತ್ರ್ಯ.

ಕಲ್ಲುರ್ಟಿ ಕಲ್ಕುಡ ದೈವಗಳು ಪಣೋಲಿಬೈಲಿಗೆ ಬರುವ ಮೊದಲು ಬಂಟ್ವಾಳದ ಸಜೀಪ ಎಂಬ ಊರಿಗೆ ಭೇಟಿ ಮಾಡುತ್ತಾರೆ. ಅ ಊರಿನ ಅಧಿಕಾರ ದೈವಗಳು ನಾಲ್ಕೈತ್ತಾಯ, ನಡಿಯೇಳು ದೈಯಂಗುಳ ಮತ್ತು ಉಳ್ಳಾಲ್ದಿ ಅಮ್ಮ. ಮಿತ್ತಮಜಲು ಎಂಬಲ್ಲಿ ಈ ದೈವಗಳ ನೇಮ ನಡೆಯುತ್ತಿರುವಾಗ ಕಲ್ಲುರ್ಟಿಯು ಅದೇ ಊರಿನ ಕುಲಾಲ ವಂಶದ ವ್ಯಕ್ತಿಯ ಮೇಲೆ ಆವೇಶಭರಿತಳಾಗಿ ಬಂದು ನೆಲೆಯಾಗಲು ಜಾಗವನ್ನು ಕೇಳುತ್ತಾಳೆ. ಆಗ ಅಲ್ಲಿನ ಗುರಿಕಾರ ಜಾಗ ಕೊಡಲು ನಿರಾಕರಿಸುತ್ತಾನೆ. ಕೋಪಗೊಂಡ ಕಲ್ಲುರ್ಟಿ, ದೈವಂಗುಳ ದೈವದ ಸಿರಿಮುಡಿಗೆ ಬೆಂಕಿ ಹಾಕುತ್ತಾಳೆ. ಹೀಗೆ ಕಲ್ಲುರ್ಟಿಯು ಶಕ್ತಿಯನ್ನು ತೋರಿಸಿ ಆಕೆ ಯಾರೆಂದು ಗುರಿಕಾರನಿಗೆ ತಿಳಿಸುತ್ತಾಳೆ. ಕಲ್ಲುರ್ಟಿಯ ಮಹಿಮೆಯನ್ನು ಅರಿತ ಸಜೀಪ ಮಾಗಣೆಯ ದೈವಗಳು ಕಲ್ಲುರ್ಟಿಯ ಜೊತೆ ಒಪ್ಪಂದ ಮಾಡಿಕೊಂಡು ನೆಲೆಯಾಗಲು ಜಾಗ ಕಲ್ಪಿಸುತ್ತದೆ. ಅಲ್ಲಿಯೇ ಪಕ್ಕದಲ್ಲಿನ ಕಲ್ಲಲ್ಲಿ ಕಲ್ಲುರ್ಟಿ ನೆಲೆಯಾಗುತ್ತಾಳೆ. ಒಂದು ದಿನ ಕುಲಾಲ ವಂಶಕ್ಕೆ ಸೇರಿದ ಗುಡ್ಡ ಮೂಲ್ಯನು ಕಲ್ಲುರ್ಟಿ ನೆಲೆಯಾದ ಆ ಕಲ್ಲನ್ನು ಹೊತ್ತುಕೊಂಡು ಸಂಚಾರ ಆರಂಭಿಸುತ್ತಾನೆ. ಆಯಾಸದಿಂದ ಬಳಲಿದ ಆತ ಕಲ್ಲನ್ನು ಕೆಳಗಿಡುತ್ತಾನೆ. ಕಲ್ಲು ಕೆಳಗಿಟ್ಟ ಅ ಜಾಗ ಈಗ ನೆಲೆಯಾಗಿರುವ ಪಣೋಲಿಬೈಲು. ಆಯಾಸ ನೀಗಿದ ನಂತರ ಗುಡ್ಡ ಮೂಲ್ಯನು ಕಲ್ಲನ್ನು ಎತ್ತಲು ಪ್ರಯತ್ನಿಸಿದಾಗ ಕಲ್ಲನ್ನು ಮೇಲೆತ್ತಲು ಆಗುವುದಿಲ್ಲ. ಕಲ್ಲು ಅಲ್ಲಿಯೇ ಸ್ಥಿರವಾಗುತ್ತದೆ. ಮುಂದೆ ಅ ಜಾಗ ಕಲ್ಲುರ್ಟಿ ಕಲ್ಕುಡರ ಪುಣ್ಯ ಕ್ಷೇತ್ರ ಪನೋಲಿಬೈಲು ಎಂದು ಪ್ರಸಿದ್ಧಿಯಾಗುತ್ತದೆ.ಈ ಜಾಗದಲ್ಲಿ ಪಟ್ಟ ಹರಕೆ ಹೇಳುತ್ತಾ ಜನರು ಕಷ್ಟ ಕಳೆಯುತ್ತಾ ಇರುವ ಶ್ರೀ ಕ್ಷೇತ್ರ ಪಣೋಲಿಬೈಲು.

ಪಣೋಲಿಬೈಲ್ ಎಂಬ ಹೆಸರನ್ನು ಉಲ್ಲೇಖಿಸಿದಾಗ ಈ ಪ್ರದೇಶದಲ್ಲಿ ಪನೆಯ ಮರ ಬಹಳಷ್ಟಿತ್ತೆಂದು ತಿಳಿದು ಬರುತ್ತದೆ. ಕಾಲಕ್ರಮೇಣ ಇದೇ ಊರಿನ ಹೆಸರಾಯಿತೆಂದು ಹೇಳಲಾಗಿದೆ. ಈ ಮರವು 60 ವರಷಗಳಿಗೊಮ್ಮೆ ಹೂ ಬಿಟ್ಟು ಸಿಂಗಾರಗೊಳ್ಳುತ್ತವೆ. ಹೀಗೆ ಹೂ ಬಿಟ್ಟ ಕಾಯಿಯಾದ ನಂತರ ಅದು ಸತ್ತು ಹೋಗುತ್ತದೆಂದು ತಿಳಿದುಬರುತ್ತದೆ. ಈ ವೃಕ್ಷವು ಅನಿಷ್ಟಕಾರಕವೆಂದು ನಂಬಲಾಗಿದೆ. ಇದು ಮನೆಯ ಅಕ್ಕಪಕ್ಕದಲ್ಲಿರುವುದು ಶುಭಲಕ್ಷಣವಲ್ಲವೆಂದೂ ಹೇಳುತ್ತಾರೆ.ಅದಕ್ಕಾಗಿ ಆ ಮರಕ್ಕೆ ಪೂಜೆಮಾಡಿ ಕಡಿದು ಉರುಳಿಸುತ್ತಾರೆ ಎಂಬುದು  ನಂಬಿಕೆ. ಈ ಪ್ರದೇಶದಲ್ಲಿ ಈ ಮರಗಳಿದ್ದ ಕಾರಣ ಮನಗಳ ಸಂಖ್ಯೆಯೂ ಕಡಿಮೆಯಾಗಿರುತ್ತದೆ. ಈ ಪ್ರದೇಶಕ್ಕೆ ಕಲ್ಲುರ್ಟಿಯ ಪ್ರವೇಶವಾಗುವುದರೊಂದಿಗೆ ಈ ಪ್ರದೇಶವು ಪಣೋಲಿಬೈಲ್ ಕ್ಷೇತ್ರವೆಮ್ದು ಈ ಜಾಗದ ದೈವದ ಹೆಸರನ್ನೆತ್ತಿದರೆ ಸಾಕು ಈ ದೈವಕ್ಕೆ ಗೋಚರವಾಗುತ್ತದೆಂದು ತಿಳಿದುಕೊಳ್ಳಲಾಗಿದೆ. ಈ ಪ್ರದೇಶಕ್ಕೆ ಬರುವ ಭಕ್ತರು ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಸುಬ್ರಹ್ಮಣ್ಯ, ನೆಲ್ಯಾಡಿ, ಮಡಿಕೇರಿ, ಮಂಗಳೂರು, ಮಂಜೇಶ್ವರ, ಕಾಸರಗೋಡು, ಉಡುಪಿ, ಕುಂದಾಪುರ, ಕಾರ್ಕಳ, ಮೂಡಬಿದ್ರೆ, ಕೊಡಗು ಮುಂತಾದ ಕಡೆಗಳಿಂದಲ್ಲದೆ ಹೊರಗಿನವರೂ ಈ ಪ್ರದೇಶಕ್ಕೆ ಹರಿಕೆ ಕಾಣಿಕೆ, ಅಗೇಲು ಕೋಲ ಬೆಳ್ಳಿ ಬಂಗಾರದ ಸೇವೆಯನ್ನು ಕೊಡುತ್ತಿದ್ದಾರೆ. ಆಸ್ತಿ ವಿಚಾರ ತಕರಾರು, ಕೋರ್ಟ್ ವಿಚಾರ ಇನ್ನಿತರ ಕಷ್ಟ ಕಾರ್ಪಣ್ಯದಲ್ಲಿದ್ದವರು ಈ ಕ್ಷೇತ್ರಕ್ಕೆ ಬಂದು ದೈವದ ಮುಂದೆ ತಮ್ಮ ಕಷ್ಟ ಕಾರ್ಪಣ್ಯವನ್ನು ತೋಡಿಕೊಂಡು ಹರಕೆಯನ್ನು ಹೇಳಿಕೊಳ್ಳುತ್ತಾರೆ. ಈಗ ಕರ್ನಾಟಕ ರಾಜ್ಯದಲ್ಲೇ ಸುಪ್ರಸಿದ್ಧ ಕ್ಷೇತ್ರವೆಂದು ಹೆಸರು ಪಡೆಯುತ್ತಿದೆ. ಸತ್ಯ, ಧರ್ಮ, ನ್ಯಾಯವನ್ನು ಎತ್ತಿ ಹಿಡಿಯುವ ಈ ದೈವವು ಎಲ್ಲಾ ಮೂಲೆಗಳಂದಲೂ ಭಕ್ತರನ್ನು ಸೆಳೆದುಕೊಳ್ಳುತ್ತಿದೆ.

ಕಾವೇರಿ ಸಂಕ್ರಮಣದ ಪುಣ್ಯ ದಿನದಂದು ಪನೋಲಿಬೈಲು ಕ್ಷೇತ್ರದಲ್ಲಿ ವಿಶೇಷವಾದ ಪೂಜೆ ನಡೆಯುತ್ತದೆ. ವಾರದಲ್ಲಿ ಭಾನುವಾರ, ಮಂಗಳವಾರ ಹಾಗೂ ಶುಕ್ರವಾರದಂದು ಮಾತ್ರ ಇಲ್ಲಿ ಅಗೇಲು ಸೇವೆಯನ್ನು ಮಾಡಲಾಗುತ್ತಿದ್ದು, ಉಳಿದ ದಿನಗಳು ಅಗೇಲು ಸೇವೆ ನಿಷಿದ್ದವಾಗಿರುತ್ತದೆ. ಆದರೆ ವಿಶೇಷವೆಂದರೆ ಈ ಭಾರಿ ಕಾವೇರಿ ಸಂಕ್ರಾತಿ ಬಂದಿರುವುದು ಬುಧವಾರವಾಗಿರು ವುದರಿಂದ ಈ ದಿನವೇ ತಾಯಿಗೆ ವಿಶೇಷವಾದ ಅಗೇಲು ಸೇವೆಯನ್ನು ನೀಡಲಾಗುತ್ತಿದೆ. ಸಾವಿರಾರು ಬಗೆಯ ಬಗೆಯ ತರಕಾರಿಗಳನ್ನು ಹಾಕಿ ಪದಾರ್ಥವನ್ನು ಮಾಡಲಾಗುತ್ತದೆ. ಆ ವಿಶೇಷ ಪದಾರ್ಥವನ್ನು ಹೊಸ ಅಕ್ಕಿಯಿಂದ ತಯಾರಿಸಿದ ಅನ್ನಕ್ಕೆ ಹಾಕಿ ಮೊದಲಿಗೆ ತರಕಾರಿಯ ನೈವೆದ್ಯ ಹಾಗೂ ನಂತರ ನಿತ್ಯ ಮಾಡುವ ಕೋಳಿಯ ಪದಾರ್ಥದ ಜೊತೆಗೆ ಸೇರಿಸಿ ಅಗೇಲು ರೂಪದಲ್ಲಿ ತಾಯಿಗೆ ಬಡಿಸಲಾಗುತ್ತದೆ.

ಸಂಪ್ರದಾಯದದಂತೆ ಭತ್ತದ ತೆನೆಯನ್ನು ತಂದು ದೇವಸ್ಥಾನದಲ್ಲಿ ಕಟ್ಟಲಾಗುತ್ತದೆ. ಅದಕ್ಕೂ ಮೊದಲು ಲೊಬಾನದ ಹೊಗೆಯನ್ನು ದೈವಸ್ಥಾನದ ಸುತ್ತ ಹಿಡಿದು ಶುದ್ಧ ಮಾಡಲಾಗುತ್ತದೆ. ಬಳಿಕ ಅಮ್ಮನನ್ನು ಸಿಂಗಾರಗೊಳಿಸಲಾಗುತ್ತದೆ.

ಅಗೇಲು ಸೇವೆಗಳು

ಶ್ರೀ ಕ್ಷೇತ್ರ ಪನೋಲಿ ಬೈಲು ಕ್ಷೇತ್ರದಲ್ಲಿ ಅನೇಕ ಕಾರಣಿಕಗಳು ನಡೆದಿದೆ. ದಿನದಲ್ಲಿ ಸಾವಿರಾರು ಅಗೇಲು ಸೇವೆಗಳು ಇಂದಿಗೂ ಕೂಡ ನಡೆಯುತ್ತಿದೆ. ಅಲ್ಲದೇ ಈ ಅಗೇಲು ಸೇವೆ ದಾಖಲೆಯ ಪುಟವನ್ನೂ ಸೇರಿದೆ. ಇತಿಹಾಸವಿರುವ ಈ ದೈವಿ ಕ್ಷೇತ್ರವನ್ನು ನಂಬಿ ಅದೆಷ್ಟೋ ನೊಂದ ಜೀವಗಳು ಇಂದಿಗೂ ತಾಯಿಯ ಹೆಸರನ್ನು ಹೇಳಿ ಜೀವನ ನಡೆಸುತ್ತಿದ್ದಾರೆ. ಮನೆಯಲ್ಲಿ ಕಷ್ಟ, ಆನಾರೋಗ್ಯ, ಕಂಕಣಭಾಗ್ಯ, ಆಸ್ತಿ ತಕಾರಾರು ಇದ್ದವರು ಇಲ್ಲಿಗೆ ಹರಕೆಯನ್ನು ಹೇಳಿದರೆ ಸಾಕು ಕ್ಷಣ‌ಮಾತ್ರದಲ್ಲಿ ನೆನದ ಕೆಲಸ ಕೈಗೂಡಿದ ನಿದರ್ಶನಗಳಿವೆ. ಇಂದಿಗೂ ಕೂಡ ಅದು ನಡೆಯುತ್ತಿದೆ. ಅಗೇಲಿನ ಮೂರು ದಿನವಾದರೆ ಸಂಜೆ ಹೊತ್ತಿಗೆ ಕೋಲ ಸೇವೆ ನಡೆಯುತ್ತದೆ. ದಿನ ನಿತ್ಯ ಸಾವಿರಾರು ಅಗೇಲು ಸೇವೆಯನ್ನು ಪಡೆಯುವ ಈ ಕ್ಷೇತ್ರದಲ್ಲಿ ಪ್ರತಿ ದಿನ ಜಾತ್ರೆಯಿದ್ದಂತೆ. ಇನ್ನು ಸಸ್ಯಹಾರಿಗಳು‌ ಇಲ್ಲಿನ ಅಗೇಲು ಸೇವೆಗೆ ಕೋಳಿಯನ್ನ ಹರಕೆಯಾಗಿ ನೀಡಲ್ಲ. ಬದಲಾಗಿ ಅವರು ಹುರುಳಿಯನ್ನಷ್ಟೇ ಹರಕೆಯಾಗಿ ಸಲ್ಲಿಸ್ತಾರೆ. ಹೀಗಾಗಿ ಅಗೇಲು ಊಟದಲ್ಲಿ ಹುರುಳಿ ಏಕೈಕ ಧಾನ್ಯವಾಗಿ ಬಳಕೆ ಮಾಡಲಾಗುತ್ತೆ. ಸಹಜವಾಗಿ ಬ್ರಾಹ್ಮಣ ಮತ್ತು ಜೈನ ಸಮುದಾಯ ಈ ರೀತಿ ಹರಕೆ ತೀರಿಸಿಕೊಳ್ಳುತ್ತಾರೆ.

ಸಂಪ್ರದಾಯದದಂತೆ ಭತ್ತದ ತೆನೆಯನ್ನು ತಂದು ದೇವಸ್ಥಾನದಲ್ಲಿ ಕಟ್ಟಲಾಗುತ್ತದೆ. ಅದಕ್ಕೂ ಮೊದಲು ಲೊಬಾನದ ಹೊಗೆಯನ್ನು ದೈವಸ್ಥಾನದ ಸುತ್ತ ಹಿಡಿದು ಶುದ್ಧ ಮಾಡಲಾಗುತ್ತದೆ. ಬಳಿಕ ಅಮ್ಮನನ್ನು ಸಿಂಗಾರಗೊಳಿಸಲಾಗುತ್ತದೆ. ನಂತರ ಪ್ರತಿದಿನದಂತೆ ಭಕ್ತಾದಿಗಳು ನೀಡಿದ ಅಗೇಲನ್ನು ಸ್ವೀಕರಿಸಲಾಗುತ್ತದೆ. ಸಾಮಾನ್ಯವಾಗಿ ಅಗೇಲು ಸೇವೆ ಬುಧವಾರ ಇಲ್ಲದೆ ಇರುವುದರಿಂದ ಈ ವಿಶೇಷ ದಿನ ಅಗೇಲು ಸೇವೆ ಮಾಡಿಸಿದವರ ಸಂಖ್ಯೆ ಕಡಿಮೆ.ಒಟ್ಟು 800 ಅಗೇಲು ಮಾತ್ರ ಈ ದಿನ ಅದು ಊರಿನ ಭಕ್ತರು ತಾಯಿಗೆ ಸೇವೆಯಾಗಿ ನೀಡಿದ್ದಾರೆ.

ಜಾತ್ರಮಹೋತ್ಸವ :ಈ ಗ್ರಾಮದಲ್ಲಿ ವರುಷಕ್ಕೆ ಎರಡು ಬಾರಿ ಜಾತ್ರಮಹೋತ್ಸವ ನಡೆಯುತ್ತದೆ, (ಪುದ್ದರ್ದ ಮೆಚ್ಚಿ ಜನವರಿಯಲ್ಲಿ, ಬಿಸು ಜಾತ್ರೆ ಎಪ್ರಿಲ್‌ 14 ನೇ ತಾರೀಕಿನಂದು ನಡೆಯತ್ತದೆ) ಮುಂಚೆ ದೈವ ನುಡಿದ ನುಡಿಯಂತೆ ಹರಕೆಯ ಮುಖಾಂತರ ಬಂದಿರೊ ಬೆಳ್ಳಿ , ಬಂಗಾರವನ್ನು ಸಜೀಪದ‌ ದೈವ  ಸ್ಥಾನಕ್ಕೆ ಕೊಂಬು ವಾಲಗದ ಮುಖಾಂತರ ಇಂದಿಗೆ ಕೂಡ ಅರ್ಪಿಸಲಾಗುತ್ತದೆ, ಹಣದ ರೂಪದ ಹರಕೆಯನ್ನು ಮಾತ್ರ ಈ ದೈವಸ್ಥಾನಕ್ಕೆ ವಿನಿಯೋಗ ಮಾಡಲಾಗುತ್ತದೆ.

ಕಲ್ಲುರ್ಟಿ ಕೋಲ

ಕಲ್ಲುರ್ಟಿ ದೈವವು ಸಜೀಪ ನಡುವಿನಲ್ಲಿ ಕುಂಞತ್ ಬೈಲು, ಸಜೀಪ ಪಡುವಿನಲ್ಲಿ ಇಡಿಪಡ್ಪು, ಕುಂಞತ್ ಬೈಲಲ್ಲಿ ವರ್ಷಕ್ಕೊಂದು ಬಾರಿ ಕೋಲ ನಡೆಯಲು ಪಣೋಲಿಬೈಲಿನಿಂದ ದೈವದ ಪದೇಯಿ ಬಂಗಾರ ಬಂದು ಅದೇ ಅಭರಣದ ಮೂಲಕ ಕೋಲ ನಡೆಯುವುದಿಲ್ಲ. ಅಲ್ಲದೆ, ಸಜೀಪ ಮಾಗಣೆಯ ದೈವಗಳಾದ ನಾಲ್ಕೈತ್ತಾಯ, ನಡಿಯೇಳ್ ದೈಯಂಗುಲ ಉಲ್ಲಾಲ್ದಿಗೆ ನೇಮ ನಡೆಯುವಾಗ ನಂದಾವರ ವಿನಾಯಕ ಕ್ಷೇತ್ರದಲ್ಲಿ ಜಾತ್ರೆ ನಡೆಯುವಾಗ ಪಣೋಲಿಬೈಲಿನಲ್ಲಿ ಅಗೆಲು, ಕೋಲ ನಡೆಯುವ ಸಂಪ್ರದಾಯವಿರುವುದಿಲ್ಲ. ಆಟಿ ತಿಂಗಳಲ್ಲಿ ಕೋಲ ಇರುವುದಿಲ್ಲ. ವಾರ್ಷಿಕ ಷಷ್ಠಿಯಂದು ಕೋಲ ಇರುವುದಿಲ್ಲ. ಅಗೇಲು ಹರಕೆ ಇರುತ್ತದೆ. ವಾರದಲ್ಲಿ ಅಗೇಲು ನಡೆಯುವ ದಿವಸ – ಮಂಗಳವಾರ, ಶುಕ್ರವಾರ, ಆದಿತ್ಯವಾರ ವಾರದಲ್ಲಿ 5 ದಿವಸ (ಶನಿವಾರ, ಸೋಮವಾರ ಬಿಟ್ಟು) ಕೋಲ ನಡೆಯುತ್ತದೆ.

ಪಣೋಲಿಬೈಲು ಕ್ಷೇತ್ರದ ವತಿಯಿಂದ ಇಡೀ ಮಾಗಣೆಗೊಳಪಟ್ಟ ಸಜೀಪ ಮುನ್ನೂರು, ಸಜೀಪ ಮೂಡ, ಸಜೀಪ ನಡುವಿನಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳಾಗಿವೆ. ಪಣೋಲಿಬೈಲಿನ ಕಲ್ಲುರ್ಟಿ ದೇವಸ್ಥಾನದ ವತಿಯಿಂದ ನಂದಾವರ ಶ್ರೀ ವಿನಾಯಕ ಶಂಕರ ನಾರಾಯಣ ಕ್ಷೇತ್ರದ ಜೀರ್ಣಾಭಿವೃದ್ಧಿ ಸಂಧರ್ಭದಲ್ಲಿ ಧನ ಶಾಯವೂ ಅಲ್ಲದೆ ನಂದಾವರ ಕ್ಷೇತ್ರಕ್ಕೆ ಮಾರ್ನಬೈಲಿನಲ್ಲಿ ಮಹಾದ್ವಾರ ನಿರ್ಮಾಣಗೊಂಡಿದೆ. ಸಜೀಪದಲ್ಲಿರುವ ನಾಲ್ಕೈತ್ತಾಯ ದೈವಸ್ಥಾನದ ಪುನರ್ ನವೀಕರಣದ ಗರ್ಭಗುಡಿಯ ನಿರ್ಮಾಣಕ್ಕೆ ಧನ ನಿಯೋಗಿಸಲಾಗಿದೆ ಹಾಗೂ ಮಿತ್ತಮಜಲ್ ಕ್ಷೇತ್ರದ ನಡಿಯೇಳ್ ದೈಯಂಗುಲ ದೈವದ ದೈವಸ್ಥಾನದ ಪುನರ್ ನವೀಕರಣಕ್ಕೆ ಮತ್ತು ಸಂಕೇಶದಲ್ಲಿರುವ ಉಲ್ಲಾಲ್ದಿ ದೈವಸ್ಥಾನಕ್ಕೆ ಪಣೋಲಿಬೈಲಿನ ಕ್ಷೇತ್ರದ ವತಿಯಿಂದ ಹಣವನ್ನು ವಿನಿಯೋಗಿಸಲಾಗಿದೆ. ಇವೆಲ್ಲವೂ ನಡಿಯೇಳ್ ದೈಯಂಗುಲ ದೈವದ ನೇಮ ಮತ್ತು ನಾಲ್ಕೈತ್ತಾಯ ದೈವದ ಮಾಣಿಯಚ್ಚಿ ಸಂಧರ್ಭದಲ್ಲಿ ಪಣೋಲಿಬೈಲು ಕಲ್ಲುರ್ಟಿ ದೈವದೊಂದಿಗೆ ಸುಮಾರು 400 ವರ್ಷಗಳಿಗೂ ಹಿಂದೆ ಆದಂತಹ ಕಟ್ಟು ಕಟ್ಟಲೆ ಪ್ರಕಾರ ನಡೆದಿದೆ.

ಹಿಂದೂ – ಮುಸ್ಲಿಂ ಸಾಮರಸ್ಯದ ಕತೆ

1956ರಲ್ಲಿ ಮಂಚಿ ಗ್ರಾಮದ ಅಹಮ್ಮದ್ ಬ್ಯಾರಿಯವರು ಪಣೋಲಿಬೈಲಿನ ಜಾಗವನ್ನು ಪಡಕೊಂಡರು. ಅಹಮ್ಮದ್ ಬ್ಯಾರಿಯವರು ಈ ಜಾಗವನ್ನು ಪಡೆದ ನಂತರ ಕಲ್ಲುರ್ಟಿ ದೈವಕ್ಕೆ ಅಗೇಲು ಸೇವೆ ನಡೆಯುತ್ತಿರಲು, ದೈವಕ್ಕೆ ಅಗೇಲಿಗಾಗಿ ಅನ್ನ, ಕೋಳಿಪದಾರ್ಥ ಬೇಯಿಸಲು ಹಿಂದಿನಿಂದಲೂ ಅಲ್ಲಿನ ಮೂಲ್ಯನ್ನನವರು ಬಿದಿರು ಕಡಿದು ಅದನ್ನು ಕಟ್ಟಿಗೆಯಾಗಿ ಅಡಿಗೆಗೆ ಉಪಯೋಗಿಸುತ್ತಿದ್ದರು. ಅಹಮ್ಮದ್ ಬ್ಯಾರಿಯವರು ಇನ್ನು ಮುಂದೆ ಬಿದಿರು ಕಡಿಯಬಾರದು. ಅದು ನನ್ನ ಜಾಗ ಎಂದು ಬಿದಿರು ಕಡಿಯುವವರಿಗೆ ತಿಳಿಸಿದರು. ಕಂಗಾಲಾದ ಗುಡ್ಡ ಮೂಲ್ಯ ವಂಶಸ್ಥರು ಕಲ್ಲುರ್ಟಿ ದೈವದಲ್ಲಿ ದೂರು ಕೊಟ್ಟರು. ಅನಂತರ ಅಹಮ್ಮದ್ ಬ್ಯಾರಿಯು ಬಿಲ್ಡಿಂಗ್ ಕಂಟ್ರಾಕ್ಟ್ ದಾರನಾಗಿದ್ದು, ಆತನು ನಿರ್ಮಿಸಿದ ಬಹುಮಹಡಿ ಕಟ್ಟಡ ನೆಲಕ್ಕೆ ಕುಸಿದು ಬಿತ್ತು. ವ್ಯವಹಾರದಲ್ಲಿ ಆತನು ತೀರಾ ಕಷ್ಟ ನಷ್ಟಕ್ಕೊಳಗಾದನು. ತಾಂಬೂಲ ಪ್ರಶ್ನೆಯಲ್ಲಿ ದೈವದ ತೊಂದರೆಯೆಂದು ಮನವರಿಕೆಯಾಯಿತು. ತದನಂತರ ದೈವದ ಹೆಸರಿನಲ್ಲಿ 9 ಸೆನ್ಸ್ ಭೂಮಿಯನ್ನು ಸರ್ವೆನಂಬ್ರ 224-2ರಲ್ಲಿ ಕಲ್ಲುರ್ಟಿ ದೈವದ ಹೆಸರಿನಲ್ಲಿ ದಾನವಾಗಿ ಬರೆದುಕೊಟ್ಟನು. ದೈವದ ಅರ್ಚಕ ಮತ್ತು ಬಡಿಸುವ ಕೆಲಸವನ್ನು ಪಕೀರ ಮೂಲ್ಯನ ಹಿರಿಯವರು, ಅವರ ಮರಣಾನಂತರ ಅವರ ಕುಟುಂಬದವರಿಂದ ದೈವದ ಅರ್ಚಕ ಕೆಲಸವನ್ನು, 1965ರಿಂದ 1974ರವರೆಗೆ ಪಕೀರ ಮೂಲ್ಯ ಅವರ ಮರಣಾನಂತರ 1988ರವರೆಗೆ ಅವರ ಮೊಮ್ಮಗ ಗಂಗಯ್ಯ ಅವರ ಮರಣಾನಂತರ ಗುಡ್ಡ ಮೂಲ್ಯರ ವಂಶದವರು. 1ನೇ ಮೂಲ್ಯನ್ನನಾಗಿ ದೈವದ ಅರ್ಚಕ ಕೆಲಸವನ್ನು ಗುಡ್ಡ ಮೂಲ್ಯ ಸ್ಂತಾನದ ಸೂತಕದಂದು ಅವರ ನೆಂಟಸ್ತರಾದ ಗುಜರನ್ ಗೋತ್ರದವರು ಅರ್ಚಕ ಕೆಲಸ ಮಾಡಬೇಕು. ಕ್ಷೇತ್ರದಲ್ಲಿ ದೈವದ ಮಧು (ಅರಿಕೆ) ಹೇಳಲು ಸಜೀಪಮೂಡದ ಬರ್ಕೆ ಶೆಟ್ಟಿ ವಂಶಜರು ಹೇಳುವ ಸಂಪ್ರದಾಯ ಹಿಂದಿನಿಂದಲೂ ನಡೆಯುತ್ತಿತ್ತು.