ಕಾಸರಗೋಡು ಅತ್ಯಾಚಾರ ಮತ್ತು ಮತಾಂತರ ಪ್ರಕರಣ : ಸಿಐಡಿಗೆ ವಹಿಸುವಂತೆ ಶೋಭಾ ಕರಂದ್ಲಾಜೆ ಮನವಿ -Vishwanews24

Featured, ರಾಷ್ಟ್ರ ನ್ಯೂಸ್

ಬೆಂಗಳೂರು: ಕೇರಳದ ಕಾಸರಗೋಡಿನ ಯುವತಿ ಮೇಲಿನ ಅತ್ಯಾಚಾರ ಮತ್ತು ಮತಾಂತರ ಪ್ರಕರಣವನ್ನು ಸಿಐಡಿಗೆ ವಹಿಸುವಂತೆ ಸಂಸದೆ ಶೋಭಾ ಕರಂದ್ಲಾಜೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಮನವಿ ಮಾಡಿದ್ದಾರೆ.

ಪೊಲೀಸ್‌ ಪ್ರಧಾನ ಕಚೇರಿಯಲ್ಲಿ ಸೋಮವಾರ ಪೊಲೀಸ್‌ ಮಹಾನಿರ್ದೇಶಕರಾದ ನೀಲಮಣಿ ಎನ್‌.ರಾಜು ಮತ್ತು ಸಿಐಡಿ ಡಿಜಿಪಿ ಪ್ರವೀಣ್‌ ಸೂದ್‌ ಅವರನ್ನು ಭೇಟಿಯಾಗಿ ಪ್ರಕರಣ ಕುರಿತು ಚರ್ಚಿಸಿದ ಸಂಸದರು, ಪ್ರಕರಣ ಬೆಂಗಳೂರು, ಮಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ಎರಡು ರಾಜ್ಯಗಳಿಗೆ ಸಂಬಂಧಿಸಿದ್ದಾಗಿದೆ. ಅಲ್ಲದೆ, ಮತಾಂತರದಂತಹ ಹೇಯ ಕೃತ್ಯದ ಹಿಂದೆ ಯಾರೆಲ್ಲ ಇದ್ದಾರೆ ಎಂಬುದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕಿದೆ. ಹೀಗಾಗಿ ಪ್ರಕರಣವನ್ನು ಸಿಐಡಿಗೆ ವಹಿಸುವಂತೆ ಮನವಿ ಮಾಡಿದ್ದಾರೆ.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, 18 ವರ್ಷದ ಯುವತಿಗೆ ಮತ್ತು ಬರಿಸುವ ಔಷಧಿ ನೀಡಿ ಅತ್ಯಾಚಾರ ಎಸಗಿದಲ್ಲದೆ, ಇಡೀ ಕುಟುಂಬ ವನ್ನು ಮತಾಂತರಕ್ಕೆ ಯತ್ನಿಸಿದ್ದಾರೆ. ಈಗಾಗಲೇ ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಅನ್ಸರ್‌ ಎಂಬಾತನನ್ನು ಬಂಧಿಸಿದ್ದಾರೆ. ಸಂತ್ರಸ್ತೆ ಹೇಳಿಕೆ ದಾಖಲಿಸಿಕೊಂಡು, ಆಕೆಯ ವೈದ್ಯಕೀಯ ಪರೀಕ್ಷೆ ಕೂಡ ನಡೆಸಲಾಗಿದೆ ಎಂದರು.

ಸಂತ್ರಸ್ತೆಯ ವೈಯಕ್ತಿಕ ವಿಡಿಯೋ ಇಟ್ಟುಕೊಂಡು ಆಕೆ ಸೇರಿ ಇಡೀ ಕುಟುಂಬ ಮತಾಂತರಕ್ಕೆ ಒತ್ತಾಯಿಸಿದ ಆರೋಪಿಗಳ ತಂಡ ಯಾವುದು? ಯಾವ ಕೆಲಸ ಮಾಡು ತ್ತಿದ್ದರು? ಅವರ ಅಕ್ರಮ ಚಟುವಟಿಕೆಗಳೇನು? ಮತಾಂತರಕ್ಕೆ ಯಾರೆಲ್ಲ ಪ್ರೇರಣೆ ನೀಡಿದ್ದಾರೆ? ಯಾರ ಜತೆ ಸಂಪರ್ಕ ಹೊಂದಿದ್ದರು? ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಸೂಚಿಸಿರುವುದಾಗಿ ಸಂಸದರು ಹೇಳಿದರು.