ಕುದ್ರೋಳಿ ದೇವಸ್ಥಾನಕ್ಕೆ ಭೇಟಿ ನೀಡಿದ ಜನಾರ್ದನ ಪೂಜಾರಿ : ದೇವರಲ್ಲಿ ಕ್ಷಮೆ ಯಾಚನೆ -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು : ಲೋಕಸಭಾ ಚುನಾವಣೆ ಸಂದರ್ಭ ಕಾಂಗ್ರೇಸ್ ಅಭ್ಯರ್ಥಿ ಮಿಥುನ್ ರೈ ಸೋತರೆ ಕುದ್ರೋಳಿ ದೇವಸ್ಥಾನಕ್ಕೆ ಕಾಲಿಡಲ್ಲ ಎಂದು ಪ್ರತಿಜ್ಞೆ ಮಾಡಿದ್ದ ಕಾಂಗ್ರೇಸ್ ಹಿರಿಯ ಮುಖಂಡ ಜನಾರ್ಧನ ಪೂಜಾರಿ ಅವರು ಇಂದು ತಮ್ಮ ಪ್ರತಿಜ್ಞೆ ಮುರಿದು ದೇವಸ್ಥಾನ ಪ್ರವೇಶಿಸಿದ್ದಾರೆ.

ಗೋಕರ್ಣನಾಥ ದೇವರ ಮುಂದೆ ನಿಂತು ಮಾತನಾಡಿದ ಪೂಜಾರಿ, ತಾನು ಕುದ್ರೋಳಿ ದೇವಸ್ಥಾನ ಸಹಿತ ಚರ್ಚ್‌, ಮಸೀದಿಗೆ ಕಾಲಿಡುವುದಿಲ್ಲ ಎನ್ನುವ ಮೂಲಕ ತಪ್ಪು ಮಾಡಿದ್ದೇನೆ.  ಒಂದು ಆದೇಶದಂತೆ ತಪ್ಪಿನ ಮನವರಿಕೆಯಾಗಿ ಓಡಿ ಬಂದಿದ್ದೇನೆ. ದೇವರ ವಿಷಯದಲ್ಲಿ ಇನ್ನೆಂದೂ ಇಂಥ ತಪ್ಪು ಮಾಡುವುದಿಲ್ಲ. ಯಾರೂ ಇಂಥ ತಪ್ಪು ಮಾಡಬಾರದು. ಗೋಕರ್ಣ ಸಹಿತ ಪರಿವಾರ ದೇವರು ನನ್ನನ್ನು ಕ್ಷಮಿಸಬೇಕು. ಮಸೀದಿ, ಚರ್ಚ್‌ ದೇವರೂ ಕ್ಷಮಿಸಬೇಕು ಎಂದು ಪ್ರಾರ್ಥಿಸಿದರು.

ಕಳೆದ ಲೋಕಸಭೆ ಚುನಾವಣೆ ಸಂದರ್ಭ ಮೊದಲು ಕುದ್ರೋಳಿ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಬಿಜೆಪಿ ಅಭ್ಯರ್ಥಿ ನಳಿನ್‌ ಕುಮಾರ್‌ ಕಟೀಲ್‌ ಅವರನ್ನು ನೀವೇ ಗೆಲ್ಲುವುದಾಗಿ ಹೇಳಿದ್ದ ಜನಾರ್ದನ ಪೂಜಾರಿ, ಬಳಿಕ ಕಾಂಗ್ರೆಸ್‌ ಅಭ್ಯರ್ಥಿ ಮಿಥುನ್‌ ರೈ ಹೋದಾಗಲೂ ನೀವೇ ಗೆಲ್ಲುತ್ತೀರಿ ಎಂದು ಹೇಳಿ ಆಶೀರ್ವಚನ ನೀಡಿದ್ದರು. ಕಾಂಗ್ರೆಸ್‌ ಅಭ್ಯರ್ಥಿ ಮಿಥುನ್‌ ರೈ ಅವರ ನಾಮಪತ್ರಕ್ಕೆ ಮೊದಲು ನಗರದ ಪುರಭವನದಲ್ಲಿ ನಡೆದಿದ್ದ ಜಿಲ್ಲಾ ಕಾಂಗ್ರೆಸ್‌ ಸಮಾವೇಶದಲ್ಲಿ ಭಾಗವಹಿಸಿದ್ದ ಜನಾರ್ದನ ಪೂಜಾರಿ, ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮಿಥುನ್‌ ರೈ ಗೆಲ್ಲದಿದ್ದರೆ ಕುದ್ರೋಳಿ ದೇವಸ್ಥಾನಕ್ಕೆ ನಾನು ಹೋಗುವುದು ಸ್ಟಾಪ್‌ ಎಂದು ಹೇಳಿದ್ದರು.

ಚರ್ಚ್, ಮಸೀದಿಗೂ ತೆರಳುವುದಿಲ್ಲ ಎಂದು ಚುನಾವಣೆ ಸಮಯ ಹೇಳಿದ್ದೆ. ಆದರೆ, ಈಗ ಅಲ್ಲಿಗೂ ಹೋಗಿ ಕ್ಷಮೆ ಯಾಚಿಸಿ ನನ್ನ ತಪ್ಪನ್ನು ಸರಿಪಡಿಸಿಕೊಳ್ಳುತ್ತಿದ್ದೇನೆ ಎಂದರು.

ಚುನಾವಣೆಯಲ್ಲಿ ಮಿಥುನ್‌ ರೈ ಸುಮಾರು 2.74 ಲಕ್ಷ ಮತಗಳ ಅಂತರದಿಂದ ನಳಿನ್‌ ಕುಮಾರ್‌ ಎದುರು ಸೋತಿದ್ದರು. ಇದಾದ ಬಳಿಕ ಜನಾರ್ದನ ಪೂಜಾರಿ ಅವರು ಕುದ್ರೋಳಿ ದೇವಸ್ಥಾನಕ್ಕೆ ಹೋಗಿರಲಿಲ್ಲ. ಈ ಮಧ್ಯೆ, ಪೂಜಾರಿ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಬಳಿಕ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದರು.

ಪೂಜಾರಿ ಅವರು ದೇವಸ್ಥಾನಕ್ಕೆ ತೆರಳಿದ ಸಂದರ್ಭ ಮುಖಂಡರಾದ ವಿಜಯಕುಮಾರ್‌ ಶೆಟ್ಟಿ, ಕಳ್ಳಿಗೆ ತಾರನಾಥ ಶೆಟ್ಟಿ, ಕರುಣಾಕರ ಶೆಟ್ಟಿ, ಮಾಧವ ಸುವರ್ಣ, ಡಾ.ಬಿ.ಜಿ.ಸುವರ್ಣ, ಪುರುಷೋತ್ತಮ ಚಿತ್ರಾಪುರ ಮತ್ತಿತರರಿದ್ದರು.