ಕೃಷ್ಣನೂರು ಉಡುಪಿಯಲ್ಲಿ ನಾಡಹಬ್ಬ ಶ್ರೀಕೃಷ್ಣ ಜನ್ಮಾಷ್ಟಮಿಗೆ ಸಂಭ್ರಮದ ಸಿದ್ಧತೆ -Vishwanews24

Featured, ಉಡುಪಿ

ಉಡುಪಿ:ಶ್ರೀಕೃಷ್ಣ ಜನ್ಮಭೂಮಿ ಮಥುರಾ ಸೇರಿದಂತೆ ದೇಶದೆಲ್ಲೆಡೆ ಆಗಸ್ಟ್‌ 23ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ. ರಾಜ್ಯದಲ್ಲಿ ಶ್ರೀಕೃಷ್ಣನ ಪ್ರಮುಖ ಸನ್ನಿಧಾನ ಉಡುಪಿ ಶ್ರೀಕೃಷ್ಣ ಮಠದಲ್ಲಿ ಸಿದ್ಧತೆ ಭರದಿಂದ ಸಾಗಿದೆ.

ರಾಜ್ಯದ ವಿವಿಧ ಭಾಗದಿಂದ ಶ್ರೀಕೃಷ್ಣಾಷ್ಟಮಿ ಉತ್ಸವಕ್ಕೆ ಲಕ್ಷಾಂತರ ಜನ ಆಗಮಿಸುತ್ತಾರೆ. 23ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು 24ರಂದು ವಿಟ್ಲಪಿಂಡಿ ಉತ್ಸವ ನಡೆಯಲಿದ್ದು, ಇದರ ಅಂಗವಾಗಿ ನಡೆಯುವ ಧಾರ್ಮಿಕ ಮತ್ತು ಸಾಂಸ್ಕೃತಿ ಕಾರ್ಯಕ್ರಮಗಳಿಗೆ ಭಾನುವಾರ ಚಾಲನೆ ನೀಡಲಾಗಿತ್ತು.

ಆ.23ರಂದು ರಾತ್ರಿ 12.12ಕ್ಕೆ ಶ್ರೀಕೃಷ್ಣನಿಗೆ ಅಘ್ರ್ಯಪ್ರದಾನ, 24ರಂದು ಮಧ್ಯಾಹ್ನ 3ಗಂಟೆಗೆ ರಥಬೀದಿಯಲ್ಲಿ ವಿಟ್ಲಪಿಂಡಿ (ಶ್ರೀಕೃಷ್ಣ ಲೀಲೋತ್ಸವ) ನಡೆಯಲಿದ್ದು ಪೂರ್ವ ಸಿದ್ಧತೆ ಭರದಿಂದ ಸಾಗಿದೆ. 35ಕ್ಕೂ ಅಧಿಕ ಹುಲಿ ವೇಷ ತಂಡಗಳು ಶ್ರೀಕೃಷ್ಣ ಲೀಲೋತ್ಸವದಲ್ಲಿ ಪಾಲ್ಗೊಂಡು ಮೆರುಗು ನೀಡಲಿವೆ. ಅಂದು ಮೊಸರು ಕುಡಿಕೆ ಉತ್ಸವವೂ ನಡೆಯಲಿದೆ.

ಅಷ್ಟಮಿಯಂದು ಕೃಷ್ಣ ದೇವರಿಗೆ ಸಮರ್ಪಿಸಲು ಮಡಿಯಲ್ಲಿ ತಯಾರಿಸುವ ಲಡ್ಡಿಗೆ ಮುಹೂರ್ತ 23ರಂದು ಬೆಳಗ್ಗೆ 9.30ಕ್ಕೆ ಭೋಜನ ಶಾಲೆಯಲ್ಲಿ ನಡೆಯಲಿದೆ. ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಚಾಲನೆ ನೀಡಲಿದ್ದಾರೆ.

ಶ್ರೀಕೃಷ್ಣಮಠದೊಳಗೆ ಹೂವಿನ ಅಲಂಕಾರ, ವಿದ್ವಾಂಸರಿಂದ ಭಾಗವತ, ವೇದ, ಸರ್ವಮೂಲ ಪಾರಾಯಣ ನಡೆಯಲಿದೆ. ಮಧ್ಯರಾತ್ರಿಯ ಚಂದ್ರೋದಯದಲ್ಲಿ ವಿಶೇಷಪೂಜೆ, ಉಂಡೆ, ಚಕ್ಕುಲಿ ಸಹಿತ ಶ್ರೀಕೃಷ್ಣನಿಗೆ ನೈವೇದ್ಯಅರ್ಪಿಸಿದ ನಂತರ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧಿಧೀಶತೀರ್ಥ ಶ್ರೀಪಾದರಿಂದ ಅಘ್ರ್ಯಪ್ರದಾನ. ಬಳಿಕ ಅಘ್ರ್ಯ ನಮನ ಸಲ್ಲಿಸಲು ಭಕ್ತರಿಗೆ ಅವಕಾಶ.

ಶ್ರೀ ಕೃಷ್ಣಮಠದಿಂದ ಭಕ್ತರಿಗೆ ಹಾಗೂ ಚಿಣ್ಣರ ಸಂತರ್ಪಣೆಯ ಶಾಲಾ ಮಕ್ಕಳಿಗೆ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ ದಲ್ಲಿ ಉಂಡೆ, ಚಕ್ಕುಲಿ ಪ್ರಸಾದವನ್ನು ವಿಶೇಷವಾಗಿ ಕಳುಹಿಸಿಕೊಡಲಾಗುತ್ತದೆ. ಅದಕ್ಕಾಗಿ 1.5 ಲಕ್ಷ ಚಕ್ಕುಲಿ ಹಾಗೂ 1 ಲಕ್ಷ ಉಂಡೆಗಳನ್ನು ತಯಾರಿಸಲಾಗುತ್ತಿದೆ. ಮಂಗಳವಾರ ಬೆಳಗ್ಗೆ ಅನ್ನಬ್ರಹ್ಮ ಹಾಗೂ ಮಧ್ವಾಂಗಣದಲ್ಲಿ ನೂರಕ್ಕೂ ಹೆಚ್ಚು ಬಾಣಸಿಗರು ಚಕ್ಕುಲಿ, ಗುಂಡಿಟ್ಟು ಲಾಡು, ಅರಳುಂಡೆ, ನೆಲಕಡ್ಲೆ ಲಾಡು, ಹೆಸರಿಟ್ಟು ಲಾಡು, ಕಡ್ಲೆ ಹಾಗೂ ಎಳ್ಳು ಉಂಡೆ, ಶುಂಠಿ, ಗೋಡಂಬಿ ಲಾಡು ತಯಾರಿಸಲಿದ್ದಾರೆ.

ವಿಟ್ಲಪಿಂಡಿ ಉತ್ಸವದಲ್ಲಿ ಮೊಸರು ಕುಡಿಕೆ ಹೊಡೆಯಲು ರಥಬೀದಿಯಲ್ಲಿ ಗುರ್ಜಿಗಳನ್ನು ನಿಲ್ಲಿಸಲಾಗುತ್ತಿದೆ. 13 ಮರದ ತ್ರಿಕೋನಾಕೃತಿಯ ಗುರ್ಜಿಗಳನ್ನು ನಿರ್ಮಿಸಿ ಮೊಸರು ಕುಡಿಕೆಗೆ ಸಿದ್ಧತೆ ನಡೆಸಲಾಗುತ್ತಿದೆ. ಶ್ರೀ ಕೃಷ್ಣಮಠದಲ್ಲಿ ಗೋವುಗಳನ್ನು ನೋಡಿಕೊಳ್ಳುವ ಗೋವಳರು ಮೊಸರುಕುಡಿಕೆ ಒಡೆಯುವ ಕಾಯಕ ನಿರ್ವಹಿಸುತ್ತಾರೆ. ರಥಬೀದಿ ತೆಂಕ ಪೇಟೆ ಮತ್ತು ಕನಕ ಗೋಪುರದ ಕೆಳಗೆ ಬೃಹತ್ ಮಂಟಪದ ಗುರ್ಜಿ ನಿರ್ಮಿಸಲಾಗಿದೆ.