ಕೇಂದ್ರ ಸಚಿವರನ್ನು ಭೇಟಿಯಾದ ಕೋಟ ಶ್ರೀನಿವಾಸ್ : ರಾಜ್ಯದ ವಿವಿಧ ಮೀನುಗಾರಿಕೆ ಹಾಗೂ ಬಂದರು ಯೋಜನೆಗಳ ಕುರಿತು ಚರ್ಚೆ -Vishwanews24
ಹೊಸದಿಲ್ಲಿ: ಕರ್ನಾಟಕ ರಾಜ್ಯದ ವಿವಿಧ ಮೀನುಗಾರಿಕೆ ಹಾಗೂ ಬಂದರು ಯೋಜನೆಗಳ ಕುರಿತು ರಾಜ್ಯ ಮೀನುಗಾರಿಕೆ ಮತ್ತು ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಇಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರೊಂದಿಗೆ ಹೊಸದಿಲ್ಲಿಯಲ್ಲಿ ಚರ್ಚೆ ನಡೆಸಿದರು.
ಉಡುಪಿ ಜಿಲ್ಲೆಯ ಗಂಗೊಳ್ಳಿಯಲ್ಲಿ, ಕಾರವಾರದ ಮಾವಾಳಿ ಹಾಗೂ ಮಂಗಳೂರಿನ ಬೈಕಂಪಾಡಿಯಲ್ಲಿ ಸಂಯೋಜಿತ ಸೀ ಫುಡ್ ಪಾರ್ಕ್ ಯೋಜನೆಗಳು, ರಾಜ್ಯ ಕರಾವಳಿಯ 8 ಮೀನುಗಾರಿಕೆ ಬಂದರುಗಳ ಆಧುನೀಕರಣ ಹಾಗೂ 16 ಕಡೆಗಳಲ್ಲಿ ಮೀನುಗಾರಿಕೆ ತಾಣಗಳ ಉನ್ನತೀಕರಣ ಸೇರಿದಂತೆ ನಾನಾ ಯೋಜನೆಗಳಿಗೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರೊಂದಿಗೆ ಸಚಿವ ಕೋಟ ಚರ್ಚಿಸಿ, ಅನುದಾನ ಮಂಜೂರು ಮಾಡುವಂತೆ ಮನವಿ ಮಾಡಿದರು.
ಯೋಜನಾ ವರದಿ ಪರಿಶೀಲಿಸಿದ ಸಚಿವರು, ಧನಾತ್ಮಕವಾಗಿ ಸ್ಪಂದಿಸಿ, ಯೋಜನೆಗಳನ್ನು ಶೀಘ್ರವಾಗಿ ಅನುಷ್ಠಾನ ಮಾಡುವಂತೆ ಹಾಗೂ ಪ್ರಧಾನ ಮಂತ್ರಿಯವರ ಆತ್ಮ ನಿರ್ಭರ ಭಾರತ ಯೋಜನೆ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ RKVY ಮುಖಾಂತರ ಯೋಜನೆಗಳಿಗೆ ಅನುಮೋದನೆ ನೀಡಿ, ಅನುದಾನ ಮಂಜೂರು ಮಾಡುವ ಭರವಸೆ ನೀಡಿದರು. ಕರ್ನಾಟಕ ಮೀನುಗಾರಿಕೆ ಇಲಾಖೆ ನಿರ್ದೇಶಕರಾದ ರಾಮಾಚಾರಿ ಉಪಸ್ಥಿತರಿದ್ದರು.
