ಕೋವಿಡ್-19 ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಪರಿಹಾರ ಕೋರಿ ಅರ್ಜಿ ಸಲ್ಲಿಸಲು ಕಾಲಮಿತಿ ನಿಗದಿ – Vishwanews24
ಕೋವಿಡ್-19 ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಪರಿಹಾರ ಕೋರಿ ಅರ್ಜಿ ಸಲ್ಲಿಸಲು ಕಾಲಮಿತಿ ನಿಗದಿ
ಬೆಂಗಳೂರು : ಕೋವಿಡ್-19ರ ವೈರಾಣು ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಪರಿಹಾರ ಕೋರಿ ಅರ್ಜಿ ಸಲ್ಲಿಸಲು ಮರಣ ಸಂಭವಿಸಿದ ದಿನಾಂಕದಿಂದ 90 ದಿನಗಳ ಕಾಲಮಿತಿಯನ್ನು ನಿಗದಿಗೊಳಿಸಲಾಗಿದೆ.ಮಾ.20ಕ್ಕಿಂತ ಮೊದಲು ಕೋವಿಡ್ನಿಂದ ಮೃತಪಟ್ಟ ವ್ಯಕ್ತಿಗಳ ಪ್ರಕರಗಳಲ್ಲಿ ಪರಿಹಾರ ಕೋರಿ ಅರ್ಜಿ ಸಲ್ಲಿಸಲು 60 ದಿನಗಳ ಕಾಲಮಿತಿಯನ್ನು ನಿಗದಿಪಡಿಸದ್ದರೆ, ಮಾ.20ರ ನಂತರ ಮೃತಪಟ್ಟ ಪ್ರಕರಣಗಳಲ್ಲಿ ಪರಿಹಾರದ ಅರ್ಜಿ ಸಲ್ಲಿಸಲು 90 ದಿನಗಳ ಕಾಲಮಿತಿಯನ್ನು ನಿಗದಿ ಪಡಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.
ಪರಿಹಾರ ಕೋರಿ ಸ್ವೀಕೃತವಾದ ಅರ್ಜಿಗಳ ಸಂಸ್ಕರಣೆ ಹಾಗೂ ಪರಿಹಾರ ಪಾವತಿಗೆ 30 ದಿನಗಳ ಕಾಲ ಮಿತಿ ಅನ್ವಯವಾಗಲಿದೆ. ಕೇಂದ್ರ ಸರ್ಕಾರದ ಎಸ್ಡಿಆರ್ಎಫ್ ಮಾರ್ಗಸೂಚಿ ಅನ್ವಯ ಕೋವಿಡ್ನಿಂದ ಮೃತಪಟ್ಟ ವ್ಯಕ್ತಿಯ ಕಾನೂನು ಬದ್ಧ ವಾರಸುದಾರರಿಗೆ 50 ಸಾವಿರ ರೂ.ಗಳ ಪರಿಹಾರ ಧನ ನೀಡಲಾಗುತ್ತದೆ.
ಸುಳ್ಳು ಮಾಹಿತಿ ಅಥವಾ ನಕಲಿ ಅರ್ಜಿ ಸಲ್ಲಿಸಿ ಪರಿಹಾರ ಪಡೆದಿರುವುದು ಸಾಬೀತಾದರೆ ಆ ಪರಿಹಾರದ ಮೊತ್ತವನ್ನು ಸರ್ಕಾರ ವಸೂಲು ಮಾಡುತ್ತದೆ. ಅಲ್ಲದೆ, ವಿಪತ್ತು ನಿರ್ವಹಣಾ ಕಾಯ್ದೆಯಡಿ ಸೂಕ್ತ ದಂಡದೊಂದಿಗೆ ಎರಡು ವರ್ಷಗಳ ವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಗೆ ಗುರಿಗೊಳಿಸಲಾಗುತ್ತದೆ.
ಮಾರ್ಗ ಸೂಚಿಗಳಲ್ಲಿ ಸೂಚಿಸುವಂತೆ ಸೂಕ್ತ ವಿಚಾರಣೆ ನಡೆಸದೆ ಮನವಿಗಳನ್ನು ಪರಿಗಣಿಸದೆ ಕೋವಿಡ್-19ರ ಪರಿಹಾರ ವಿತರಣೆಗೆ ಶಿಫಾರಸು ಮಾಡುವ ಅಕಾರಿ ಮತ್ತು ಸಿಬ್ಬಂದಿ ವಿರುದ್ಧವೂ ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರು ಶಿಸ್ತು ಕ್ರಮ ಕೈಗೊಳ್ಳಬಹುದಾಗಿದೆ ಎಂದು ಕಂದಾಯ ಹೊರಡಿಸಿರುವ ಸುತ್ತೋಲೆಯಲ್ಲಿ ವಿವರಿಸಲಾಗಿದೆ.
