ಕೋವಿಡ್ : ಖಾಸಗಿ ಬಸ್ ಉದ್ಯಮ ಸುಮಾರು 400 ಕೋಟಿ ರೂಪಾಯಿ ನಷ್ಟ: ಸರ್ಕಾರ ತೆರಿಗೆ ಮನ್ನಾ ಮಾಡಲು ಆಗ್ರಹ-vishwanews24

Featured, ಉಡುಪಿ

ಕೋವಿಡ್ : ಖಾಸಗಿ ಬಸ್ ಉದ್ಯಮ ಸುಮಾರು 400 ಕೋಟಿ ರೂಪಾಯಿ ನಷ್ಟ: ಸರ್ಕಾರ ತೆರಿಗೆ ಮನ್ನಾ ಮಾಡಲು ಆಗ್ರಹ

ಉಡುಪಿ: ಕೋವಿಡ್ ನಿಂದಾಗಿ ಖಾಸಗಿ ಬಸ್ ಉದ್ಯಮ ಭಾರೀ ನಷ್ಟದಲ್ಲಿದ್ದು, ಒಟ್ಟಾರೆ ಸುಮಾರು 400 ಕೋ. ರೂ. ನಷ್ಟವಾಗಿದೆ. ಸರ್ಕಾರ ಕೆ.ಎಸ್.ಆರ್.ಟಿ.ಸಿ. ಸಂಸ್ಥೆಗೆ 2,380 ಕೋ. ರೂ. ಸಹಾಯಧನ ನೀಡಿದಂತೆ ಖಾಸಗಿ ಬಸ್ ನವರಿಗೆ ಜುಲೈನಿಂದ ಡಿಸೆಂಬರ್ ವರೆಗಿನ ತೆರಿಗೆ ಮನ್ನಾ ಮಾಡಬೇಕು. ಅದು ಸುಮಾರು 80 ಕೋ. ರೂ.ನಷ್ಟು ಆಗಲಿದೆ ಎಂದು ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕರ್ನಾಟಕ ರಾಜ್ಯ ಬಸ್ ಮಾಲಕರ ಸಂಘದ ಒಕ್ಕೂಟ ಅಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್ ಆಗ್ರಹಿಸಿದರು.
(ವಿಶ್ವನ್ಯೂಸ್24)
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ 20 ಜಿಲ್ಲೆಗಳಲ್ಲಿ ಖಾಸಗಿ ಬಸ್ ಸಂಚರಿಸುತ್ತಿದೆ. ರಾಜ್ಯದಲ್ಲಿ ಸುಮಾರು 9 ಸಾವಿರ ಬಸ್ ಗಳಿದ್ದು, ಕೋವಿಡ್ ಸಂಕಷ್ಟದಿಂದಾಗಿ ನಷ್ಟ ಅನುಭವಿಸಿದ ಪರಿಣಾಮ ಸುಮಾರು 2 ಸಾವಿರ ಬಸ್ ಮಾತ್ರ ಸಂಚರಿಸುತ್ತಿವೆ. ಸರೆಂಡರ್ ಮಾಡಿದ ಬಸ್ ಗಳನ್ನು ಮತ್ತೆ ಚಾಲನೆಗೊಳಿಸಲು ಸಾವಿರಾರು ರೂ. ಖರ್ಚಿದೆ. ಬಸ್ ಸಂಚಾರ ಸ್ಥಗಿತಗೊಳಿಸಲಾಗಿದ್ದರೂ ಸಾಲದ ಮೊತ್ತ, ವಿಮೆ ಇತ್ಯಾದಿ ಕಟ್ಟಲೇಬೇಕಾಗಿದೆ. ಡೀಸೆಲ್ ಬೆಲೆ ಏರಿಕೆಯಿಂದಾಗಿ ಬಸ್ ದರವನ್ನು ಶೇ. 20ರಷ್ಟು ಏರಿಕೆ ಮಾಡಿದರೂ ನಷ್ಟ ಅನುಭವಿಸಬೇಕಾಗಿದೆ ಎಂದರು.

ಸರ್ಕಾರದ ಸಹಾಯಧನದಿಂದಾಗಿ ಸರ್ಕಾರಿ ಬಸ್ ನವರು ಖಾಸಗಿ ಬಸ್ ಮಾರ್ಗದಲ್ಲಿ ಪರವಾನಿಗೆ ರಹಿತವಾಗಿ ಸಂಚರಿಸಿ, ಖಾಸಗಿಯವರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಈಚೆಗೆ ಸರ್ಕಾರಿ ಬಸ್ ಮುಷ್ಕರ ನಡೆದಿದ್ದಾಗ ಖಾಸಗಿ ಬಸ್ ನವರೇ ಸಹಕಾರ ನೀಡಿದ್ದನ್ನು ಸರ್ಕಾರ ಮರೆಯಬಾರದು ಎಂದಿರುವ ಕುಯಿಲಾಡಿ, ಬಸ್ ಮಾಲಕರ ಬೇಡಿಕೆ ಈಡೇರಿಕೆ ಕುರಿತಂತೆ ಈಗಾಗಲೇ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರನ್ನು ವಿನಂತಿಸಿದರೂ ಅವರು ಮೀನಮೇಷ ಎಣಿಸುತ್ತಾರೆ ಎಂದರು.

ಹೊಸ ಸಾರಿಗೆ ನಿಯಮದಂತೆ ಸರ್ಕಾರಿ ಸ್ವಾಮ್ಯದ ಮಾರ್ಗಗಳಲ್ಲೂ ಖಾಸಗಿ ಬಸ್ ನವರಿಗೆ ಅವಕಾಶ ನೀಡಬೇಕು. ಸರ್ಕಾರಿ ಬಸ್ ದರ ಪರಿಷ್ಕರಣೆ ಮಾಡಬೇಕು ಎಂದವವರು ಆಗ್ರಹಿಸಿದರು.

ಸರ್ಕಾರ ತಮ್ಮ ಬೇಡಿಕೆ ಈಡೇರಿಸಿದಲ್ಲಿ ಸರ್ಕಾರಿ ಬಸ್ ಗಿಂತ ಉತ್ತಮ ಸೇವೆ ನೀಡುವುದಾಗಿ ಭರವಸೆ ನೀಡಿದರು.

ತಮ್ಮ ಬೇಡಿಕೆ ಈಡೇರಿಸಲು ರಾಜ್ಯದ 20 ಜಿಲ್ಲೆಗಳ ಬಸ್ ಮಾಲಕರ ಸಂಘಗಳನ್ನೊಳಗೊಂಡ ರಾಜ್ಯ ಮಟ್ಟದ ಒಕ್ಕೂಟ ರಚಿಸಲಾಗಿದ್ದು, ಆ ಮೂಲಕ ತಮ್ಮ ಬೇಡಿಕೆ ಈಡೇರಿಕೆಗೆ ಪ್ರಯತ್ನಿಸಲಾಗುವುದು ಎಂದರು.

ಸುದ್ದಿಗೋಷ್ಟಿಯಲ್ಲಿ ಒಕ್ಕೂಟದ ಕಾರ್ಯಾಧ್ಯಕ್ಷ ಲಿಂಗಾರೆಡ್ಡಿ ಚಿತ್ರದುರ್ಗ, ಉಪಾಧ್ಯಕ್ಷರಾದ ಸದಾನಂದ ಛಾತ್ರ ಉಡುಪಿ, ಮಂಜುನಾಥ ತುಮಕೂರು, ಅನ್ವರ್ ಪಾಶಾ ಚಾಮರಾಜನಗರ, ರಂಗಪ್ಪ ಶಿವಮೊಗ್ಗ, ಮಲ್ಲೇಶಪ್ಪ ದಾವಣಗೆರೆ, ಕುಮಾರಸ್ವಾಮಿ ಬೆಂಗಳೂರು ಗ್ರಾಮಾಂತರ ಮತ್ತು ವಜ್ರಗೌಡ ಮೈಸೂರು, ಪ್ರಧಾನ ಕಾರ್ಯದರ್ಶಿ ಕೆ. ಕೆ. ಬಾಲಕೃಷ್ಣ ಚಿಕ್ಕಮಗಳೂರು, ಕಾರ್ಯದರ್ಶಿ ವಿಕ್ರಮ್ ಬೆಂಗಳೂರು, ಜೊತೆ ಕಾರ್ಯದರ್ಶಿಗಳಾದ ಜೀವಂಧರ ಅಧಿಕಾರಿ ಮಂಗಳೂರು, ಮಂಜೇಗೌಡ ಮಂಡ್ಯ, ಶಿವಗಣೇಶ್ ಬೆಂಗಳೂರು ಗ್ರಾಮಾಂತರ, ಮಾಧವ ನಾಯ್ಕ ಧಾರವಾಡ, ಆರ್. ಪಾರಿ ಮೈಸೂರು ಮತ್ತು ಶಿವಕುಮಾರ್ ಬೆಂಗಳೂರು, ಸಂಘಟನಾ ಕಾರ್ಯದರ್ಶಿಗಳಾದ ಜ್ಯೋತಿಪ್ರಸಾದ್ ಹೆಗ್ಡೆ ಮಂಗಳೂರು, ಅಜ್ಜಪ್ಪ ಚಿತ್ರದುರ್ಗ ಮತ್ತು ಶಂಕರನಾರಾಯಣ ತುಮಕೂರು, ಕೋಶಾಧಿಕಾರಿ ದಿಲ್ ರಾಜ್ ಆಳ್ವ ಮಂಗಳೂರು ಹಾಗೂ ಗೌರವ ಸಲಹೆಗಾರರಾದ ಜಯಪ್ರಕಾಶ ಶೆಣೈ ಮಂಗಳೂರು, ರತ್ನಾಕರ ಅಧಿಕಾರಿ ಧಾರವಾಡ ಮತ್ತು ಸುಭಾಷ್ ರೆಡ್ಡಿ ಚಿಕ್ಕಬಳ್ಳಾಪುರ ಇದ್ದರು