ಗಣೇಶ ಹಬ್ಬದ ಹಿನ್ನೆಲೆ : ಸೆ. 14ರಂದು ಮುಳ್ಳಯ್ಯನಗಿರಿಗೆ ಪ್ರವೇಶ ನಿರ್ಬಂಧ – vishwanews24
ಗೌರಿ – ಗಣೇಶ ಹಬ್ಬದ ಹಿನ್ನೆಲೆ : ಸೆ.14ರಂದು ಮುಳ್ಳಯ್ಯನಗಿರಿ ಸೇರಿ ಗಿರಿಧಾಮಗಳಿಗೆ ಪ್ರವಾಸಿಗರ ಪ್ರವೇಶ ನಿರ್ಬಂಧ
ಚಿಕ್ಕಮಗಳೂರು: ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಪ್ರಸಿದ್ಧ ಗಿರಿಧಾಮಗಳಿಗೆ ಪ್ರವಾಸ ಕೈಗೊಳ್ಳಲು ಯೋಜಿಸಿರುವ ಪ್ರವಾಸಿಗರಿಗೆ ಜಿಲ್ಲಾಡಳಿತ ಮಹತ್ವದ ಸೂಚನೆ ನೀಡಿದೆ. ಸೆಪ್ಟೆಂಬರ್ 14ರಂದು ಒಂದು ದಿನದ ಮಟ್ಟಿಗೆ ಮುಳ್ಳಯ್ಯನಗಿರಿ ಸೇರಿದಂತೆ ಚಂದ್ರದ್ರೋಣ ಪರ್ವತ ಸಾಲಿನ ಪ್ರಮುಖ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಚೌತಿ ಹಬ್ಬದ ಹಿನ್ನೆಲೆಯಲ್ಲಿ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಹಾಗೂ ಶ್ರೀ ಗುರು ನಾರುಕಂತೆ ಮಠಗಳಿಗೆ ಸುತ್ತಮುತ್ತಲಿನ 40ಕ್ಕೂ ಹೆಚ್ಚು ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಲಿದ್ದಾರೆ. ಹಣ್ಣು-ಕಾಯಿ ಸೇವೆ ಸಲ್ಲಿಸುವುದು ಹಾಗೂ ಚೌತಿ ಕಾಯಿ ಹೊಡೆಯುವಂತಹ ಸಾಂಪ್ರದಾಯಿಕ ಆಚರಣೆಗಳಲ್ಲಿ ಭಕ್ತರು ಪಾಲ್ಗೊಳ್ಳಲಿದ್ದಾರೆ. ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ಆಚರಣೆಗೆ ಯಾವುದೇ ರೀತಿಯ ಅಡಚಣೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಪ್ರವಾಸಿಗರ ಪ್ರವೇಶವನ್ನು ಒಂದು ದಿನದ ಮಟ್ಟಿಗೆ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಆಗುಂಬೆ ಘಾಟಿ ರಸ್ತೆ ಅಭಿವೃದ್ಧಿಗೆ 18 ಕೋ. ರೂ. ಅನುದಾನ ಬಿಡುಗಡೆ – vishwanews24
ಹಬ್ಬದ ದಿನದಂದು ಸಾವಿರಾರು ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಪ್ರವಾಸಿಗರ ವಾಹನಗಳ ಸಂಖ್ಯೆಯೂ ಹೆಚ್ಚಾದರೆ ಪ್ರಮುಖ ಗಿರಿಧಾಮಗಳ ಮಾರ್ಗಗಳಲ್ಲಿ ತೀವ್ರ ವಾಹನ ದಟ್ಟಣೆ ಹಾಗೂ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆಯಿದೆ. ಇದರಿಂದ ಭಕ್ತರು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ, ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಹಾಗೂ ಮಾಣಿಕ್ಯಧಾರಾ ಸೇರಿದಂತೆ ಚಂದ್ರದ್ರೋಣ ಪರ್ವತ ಸಾಲಿನ ಪ್ರವಾಸಿ ತಾಣಗಳಿಗೆ ಸೆಪ್ಟೆಂಬರ್ 14ರಂದು ಪ್ರವಾಸ ಕೈಗೊಳ್ಳುವುದನ್ನು ಮುಂದೂಡುವಂತೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಪ್ರವಾಸಿಗರಲ್ಲಿ ಮನವಿ ಮಾಡಿದ್ದಾರೆ. ಸೆಪ್ಟೆಂಬರ್ 14ರಂದು ಪ್ರವಾಸಿಗರ ಪ್ರವೇಶ ನಿರ್ಬಂಧವಿದ್ದರೂ, ಹಬ್ಬದ ಸಾಂಪ್ರದಾಯಿಕ ಆಚರಣೆಗಳಲ್ಲಿ ಪಾಲ್ಗೊಳ್ಳುವ ಸ್ಥಳೀಯ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಮಂಗಳೂರು: ಗೋಹತ್ಯೆ ಸಂಪೂರ್ಣ ನಿಷೇಧ ಆಗ್ರಹಿಸಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ – vishwanews24
