ಗುರುರಾಜ್ ಗಂಟಿಹೊಳೆ ಪರ ಬೃಹತ್ ರೋಡ್ ಶೋ ಮತ್ತು ಪಾದಯಾತ್ರೆ – Vishwanews24
ಬಿಜೆಪಿ ಅಧಿಕಾರಕ್ಕೆ ಬಂದರೆ ಮೀನುಗಾರರ ಬಹುಪಾಲು ಸಮಸ್ಯೆಗೆ ಪರಿಹಾರ ಸಿಗಲಿದೆ : ಯಶ್ಪಾಲ್ ಸುವರ್ಣ
ಬೈಂದೂರು: ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ಮೀನುಗಾರರ ಬಹುಪಾಲು ಸಮಸ್ಯೆ ಪರಿಹಾರ ಸಿಗಲಿದೆ ಎಂದು ಉಡುಪಿ ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಸುವರ್ಣ ಅವರು ಭರವಸೆ ನೀಡಿದ್ದಾರೆ.
ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಅವರ ಪರವಾಗಿ ನಡೆದ ಪ್ರಚಾರದ ವೇಳೆ ಮಾತನಾಡಿದ ಅವರು, ಗುರುರಾಜ ಗಂಟಿಹೊಳೆಯವರು ಆರೆಸ್ಸೆಸ್ನ ಪ್ರಚಾರಕರಾಗಿ, ಪಕ್ಷದ ನಿಷ್ಟಾವಂತ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಸಾಮಾನ್ಯ ಕಾರ್ಯಕರ್ತನನ್ನು ಪಕ್ಷ ಗುರುತಿಸಿ ಅವಕಾಶ ನೀಡಿದೆ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ಮೀನುಗಾರರ ಬಹುಪಾಲು ಸಮಸ್ಯೆ ಪರಿಹಾರ ಸಿಗಲಿದೆ ಕಾರ್ಯಕರ್ತರಾದ ನಾವೆಲ್ಲರು ಇನ್ನುಳಿದ ಎರಡುಮೂರು ದಿನದಲ್ಲಿ ಹೆಚ್ಚು ಶ್ರಮವಹಿಸಿ ಮನೆ ಮನೆ ಭೇಟಿ, ಪ್ರಚಾರ ಮಾಡುವ ಮೂಲಕ ಅವರನ್ನು ಪೂರ್ಣ ಬಹುಮತದೊಂದಿಗೆ ಗೆಲ್ಲಿಸಬೇಕು ಎಂದು ಕರೆ ನೀಡಿದರು.


ಉಡುಪಿ ಶಾಸಕ ಕೆ.ರಘುಪತಿ ಭಟ್ ಅವರು ಮಾತನಾಡಿ, ಗುರುರಾಜ ಗಂಟಿಹೊಳೆಯವರೊಂದಿಗೆ ಯುವ ಸಮೂಹವೇ ಇದೆ. ಅವರ ಗೆಲುವಿಗೆ ಎಲ್ಲರೂ ಒಟ್ಟಾಗಿ ಶ್ರಮೀಸಬೇಕು. ಮೀನುಗಾರರ ಸೀಮೆಎಣ್ಣೆ ಸಮಸ್ಯೆಗೆ ಕೇಂದ್ರ ಸರಕಾರ ಶಾಶ್ವತ ಪರಿಹಾರ ನೀಡಲಿದೆ. ಇದಕ್ಕಾಗಿ ರಾಜ್ಯದಲ್ಲೂ ಅಧಿಕಾರಕ್ಕೆ ಬರಬೇಕು. ಬೈಂದೂರಿನಲ್ಲೂ ಗುರು ಅಣ್ಣ ಜಯ ಸಾಧಿಸಬೇಕು ಎಂದರು.
ರೋಡ್ ಶೋ ವೇಳೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು ಸೇರಿದ್ದರು. ಉಪ್ಪುಂದದ ಅಳುವೆಕೋಡಿಯಿಂದ ಕರ್ಕಿಕಾಳಿಯವರೆಗೂ ನಿನ್ನೆ ಸಂಜೆ ಭರ್ಜರಿ ರೋಡ್ ಶೋ ನಡೆಸಿ, ಬಿಜೆಪಿ ನಾಯಕರು ಮತ ಯಾಚಿಸಿದರು. ಹಾಗೂ ದಾರಿಯೂದ್ದಕ್ಕೂ ಜೈ ಶ್ರೀರಾಮ್, ಭಾರತ್ ಮಾತಾ ಕೀ ಜೈ, ಜೈ ಬಿಜೆಪಿ, ಜೈ ಮೋದಿ ಘೋಷಣೆಗಳು ಮುಗಿಲು ಮುಟ್ಟಿದ್ದವು.


ಈ ಸಂದರ್ಭದಲ್ಲಿ ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಬೈಂದೂರು ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ, ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ, ಬಿಜೆಪಿ ಹಿಂದುಳಿದ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಗೋವಿಂದ ಬಾಬು ಪೂಜಾರಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಆನಂದ ಖಾರ್ವಿ ಉಪ್ಪುಂದ, ಪಕ್ಷದ ಮುಖಂಡರು ಹಾಗೂ, 5 ಸಾವಿರಕ್ಕೂ ಅಧಿಕ ಮಂದಿ ಕಾರ್ಯಕರ್ತರು ರೋಡ್ ಶೋದಲ್ಲಿ ಭಾಗವಹಿಸಿದ್ದರು.
