ಗೋ ಕಳ್ಳತನ ಪ್ರಕರಣ : ಕಾರ್ಕಳ ಬಜರಂಗದಳ ಮಾಜಿ ಸಂಚಾಲಕ ಅನಿಲ್ ಪ್ರಭು ಬಂಧನ -Vishwanews24
ಗೋ ಕಳ್ಳತನ ಪ್ರಕರಣ : ಕಾರ್ಕಳ ಬಜರಂಗದಳ ಮಾಜಿ ಸಂಚಾಲಕ ಅನಿಲ್ ಪ್ರಭು ಬಂಧನ -Vishwanews24
ಕಾರ್ಕಳ: ಗೋ ಕಳ್ಳತನದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳ ನಗರದ ಬಜರಂಗದಳ ಮಾಜಿ ಸಂಚಾಲಕ ಅನಿಲ್ ಪ್ರಭು ಪೊಲೀಸರು ಬಂಧಿಸಿದ್ದಾರೆ.ಬಜರಂಗದಳ ಕಾರ್ಕಳ ನಗರ ಘಟಕದ ಮಾಜಿ ಸಂಚಾಲಕ ಅನಿಲ್ ಪ್ರಭು ಬಂಧಿತ ಆರೋಪಿಯಾಗಿದ್ದಾನೆ.
ಕಳವುಗೈದ ಹಸುಗಳನ್ನು ವಧಿಸಿ ಅದರ ಮಾಂಸ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಠಾಣಾ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ದನಗಳನ್ನು ಕಳ್ಳತನ ಮಾಡುವರಿಗೆ ಈತ ಅಭಯ ನೀಡುತ್ತಿದ್ದ ಎಂಬ ಗಂಭೀರವಾದ ಆರೋಪವಿದೆ.
” ಪೊಲೀಸರಿಂದ ಯಾವುದೇ ರೀತಿ ತೊಂದರೆಯಾಗದಂತೆ ನಾನಿದ್ದೇನೆ” ಎಂದು ವಾಗ್ದಾನ ನೀಡಿ ಅವರಿಂದ ಪಾಲು ಪಡೆಯುತ್ತಿದ್ದನೆಂದು ತನಿಖೆಯ ವೇಳೆಗೆ ಹುಡ್ಕೋ ಕಾಲನಿಯ ಮೊಹಮ್ಮದ್ ಯಾಸೀನ್ ಪೊಲೀಸರಲ್ಲಿ ಬಾಯಿ ಬಿಟ್ಟಿದ್ದಾನೆ. ಅದರನ್ವಯ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಅನಿಲ್ ಪ್ರಭುನನ್ನು ಬಂಧಿಸಿದ್ದಾರೆ.
ನವಂಬರ್ 6ರಂದು ಕಾರ್ಕಳ ನಗರದ ಬಂಗ್ಲೆಗುಡ್ಡೆ ಜಂಕ್ಷನ್ ಬಳಿಯಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸಿದಾಗ ಹುಡ್ಕೋ ಕಾಲನಿಯ ಮೊಹಮ್ಮದ್ ಯಾಸೀನ್ ಎಂಬಾತನು ಬಂಗ್ಲೆಗುಡ್ಡೆಯಿಂದ ನಕ್ರೆ ಜಂಕ್ಷನ್ ಕಡೆಗೆ ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಸಂದರ್ಭ ಪೊಲೀಸರು ವಾಹನ ನಿಲ್ಲಿಸಲು ಹೇಳಿದ್ದಾರೆ. ಆದರೆ, ಈ ಸಂದರ್ಭ ಆತ ತಪ್ಪಿಸಿಕೊಂಡಿದ್ದು, ಅರ್ಧದಲ್ಲಿ ವಾಹನ ಬಿಟ್ಟು ಪರಾರಿಯಾಗಿದ್ದ. ವಾಹನ ಪರಿಶೀಲನೆ ನಡೆಸಿದ ಸಂದರ್ಭ ಪ್ಲಾಸ್ಟಿಕ್ ಚೀಲದ ಒಳಗೆ ದನದ ತಲೆ, ದನದ ಮಾಂಸ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಹುಡ್ಕೋ ಕಾಲನಿಯ ಮೊಹಮ್ಮದ್ ಯಾಸೀನ್ , ಜಯಂತಿನಗರದ ಜೀರ್ ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.
