ಗೋವುಗಳು ಬಿಜೆಪಿ ಬಯಸಿದ ರಾಜ್ಯಗಳಲ್ಲಿ ಮಾತ್ರ ಮಾತೆ, ಉಳಿದ ಕಡೆಯಲ್ಲಿಲ್ಲ ಅವರ ಕ್ಯಾತೆ ..:ಕಾಂಗ್ರೆಸ್ ಕಿಡಿ -Vishwanews24

Featured, ರಾಜ್ಯ ನ್ಯೂಸ್

 ಗೋವುಗಳು ಬಿಜೆಪಿ ಬಯಸಿದ ರಾಜ್ಯಗಳಲ್ಲಿ ಮಾತ್ರ ಮಾತೆ, ಉಳಿದ ಕಡೆಯಲ್ಲಿಲ್ಲ ಅವರ ಕ್ಯಾತೆ ..:ಕಾಂಗ್ರೆಸ್ ಕಿಡಿ -Vishwanews24

ಬೆಂಗಳೂರು: ಗೋವುಗಳು ಬಿಜೆಪಿ ಬಯಸಿದ ರಾಜ್ಯಗಳಲ್ಲಿ ಮಾತ್ರ ಮಾತೆ! ಉಳಿದ ಕಡೆಯಲ್ಲಿಲ್ಲ ಅವರ ಕ್ಯಾತೆ!. ಮೋದಿ ಆಳ್ವಿಕೆಯಲ್ಲಿ ಬೀಫ್ ರಫ್ತಿನಲ್ಲಿ ಭಾರತ ಉತ್ತುಂಗಕ್ಕೇರಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಗೋವಾದ ಬಿಜೆಪಿ ಸರ್ಕಾರ ಗೋಮಾಂಸದ ಕೊರತೆ ನೀಗಿಸಲು ರಾಜ್ಯದಿಂದಾಗುವ ಪೂರೈಕೆಯ ಕಡೆ ಆಸೆಯಿಂದ ನೋಡುತ್ತಿದೆ!. ಇದಕ್ಕೆ ಕರ್ನಾಟಕ ಬಿಜೆಪಿಯ ಅಭಿಪ್ರಾಯ ಮತ್ತು ಉತ್ತರ ಏನು ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಗೋವಾದಲ್ಲಿ ಬೀಫ್ ಕೊರತೆಯಿದೆ. ಈ ಹಿನ್ನೆಲೆಯಲ್ಲಿ ಈ ಕೊರತೆಯನ್ನು ನೀಗಿಸಲು ಕರ್ನಾಟಕದಿಂದ ಬೀಫ್ ಪೂರೈಸಲಾಗುವುದು ಎಂದು ಗೋವಾದ ಮುಖ್ಯಮಂತ್ರಿ ಪ್ರಮೋದ ಸಾವಂತ್ ಹೇಳಿರುವುದನ್ನು ಉಲ್ಲೇಖಿಸಿ ಕಾಂಗ್ರೆಸ್ ಈ ಟ್ವೀಟ್ ಪ್ರಹಾರ ನಡೆಸಿದೆ.

ಕರ್ನಾಟಕದಲ್ಲಿ ಗೋಹತ್ಯೆ ನಿಷೇಧ ಕಾನೂನನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತರಲು ಬಿಜೆಪಿ ಮುಂದಾಗುತ್ತಿದೆ. ಈಗಾಗಲೇ ವಿಧಾನಸಭೆಯಲ್ಲಿ ಗೋಹತ್ಯೆ ನಿಷೇಧ ಮಸೂದೆ ಅಂಗೀಕಾರಗೊಂಡಿದೆ. ಈ ನಡುವೆ ಗೋವಾದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದ್ದು ಅಲ್ಲಿ ಗೋಹತ್ಯೆಗೆ ನಿಷೇಧ ಇಲ್ಲ. ಜೊತೆಗೆ ಗೋವಾದಲ್ಲಿ ಮಾಂಸದ ಕೊರತೆ ನಿವಾರಿಸಲು ಕರ್ನಾಟಕದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ ಎಂಬ ಹೇಳಿಕೆಯನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ.