ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗುವ ಮನೆ, ಜಾನುವಾರು ಹಾಗೂ ಜೀವ ಹಾನಿಗೆ ಸಂಬಂಧಿಸಿ ತಲಾ 10 ಲಕ್ಷ ರೂ. ಪರಿಹಾರ ಬಿಡುಗಡೆ : ಉಡುಪಿ ಜಿಲ್ಲಾಧಿಕಾರಿ -Vishwanews24
ಉಡುಪಿ: ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗುವ ಮನೆ, ಜಾನುವಾರು ಹಾಗೂ ಜೀವ ಹಾನಿಗೆ ಸಂಬಂಧಿಸಿ ಶೀಘ್ರವೇ ಪರಿಹಾರ ನೀಡುವಂತೆ 7 ತಹಶೀಲ್ದಾರ್‌ಗೆ ತಲಾ 10 ಲಕ್ಷ ರೂ. ಹಣವನ್ನು ಮುಂಗಡವಾಗಿ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
ಎಲ್ಲ ತಹಶೀಲ್ದಾರ್‌ಗಳು ಸಂಪರ್ಕದಲ್ಲಿದ್ದಾರೆ. ನೆರೆ, ಕಡಲ್ಕೊರೆತ ಸಹಿತ ಪ್ರಾಕೃತಿಕ ವಿಕೋಪದ ತುರ್ತು ಕಾರ್ಯಾಚರಣೆಗಾಗಿ ಅಗತ್ಯ ಸಲಕರಣೆಗಳನ್ನು ಜೋಡಿಸಿಕೊಂಡಿದ್ದೇವೆ. ಇತರೆ ಇಲಾಖಾಧಿಕಾರಿಗಳೊಂದಿಗೆ ಪರಸ್ಪರ ಸಮನ್ವಯ ಇಟ್ಟುಕೊಂಡಿದ್ದು, ಪ್ರಾಕೃತಿಕ ವಿಕೋಪ ಎದುರಿಸಲು ಸಜ್ಜಾಗಿದ್ದೇವೆ ಎಂದು ಹೇಳಿದ್ದಾರೆ.
ಪ್ರಾಕೃತಿಕ ವಿಕೋಪದಡಿ ಪರಿಹಾರ ನೀಡಲು ಜಿಲ್ಲಾಡಳಿತದಲ್ಲಿ ಹಣಕಾಸಿನ ಯಾವುದೇ ಕೊರತೆ ಇಲ್ಲ. ಬೈಂದೂರು ಹಾಗೂ ಕುಂದಾಪುರಗಳಲ್ಲಿ ಹೆಚ್ಚಿನ ಮಳೆ ಹಾನಿ ಸಂಭವಿಸಿದ್ದು, ವಾರದ ಹಿಂದೆ ಸಿಇಒ ಜತೆ ಸ್ವತಃ ನಾನೇ ಸ್ಥಳಕ್ಕೆ 10 ಗ್ರಾ.ಪಂ. ಗಳಿಗೆ ಭೇಟಿ ಕೊಟ್ಟು ಪರಿಶೀಲನೆ ಮಾಡಲಾಗಿದೆ. ಕಡಲ್ಕೊರೆತ ಸಂಬಂಧ ಕಾಪು ತಾಲೂಕಿನ ಉಚ್ಚಿಲ ಪ್ರದೇಶಗಳಿಗೆ ಭೇಟಿ ನೀಡಲಾಗಿದೆ ಎಂದು ತಿಳಿಸಿದರು.
