ಜುಲೈ 1ರಿಂದ ಕಬ್ಬನ್ ಪಾರ್ಕ್‍ನಲ್ಲಿ ಸಾಕು ನಾಯಿಗಳ ಪ್ರವೇಶಕ್ಕೆ ಸಂಪೂರ್ಣ ನಿರ್ಬಂಧ – Vishwanews24

Featured, ರಾಜ್ಯ ನ್ಯೂಸ್

ಜುಲೈ 1ರಿಂದ ಕಬ್ಬನ್ ಪಾರ್ಕ್‍ನಲ್ಲಿ ಸಾಕು ನಾಯಿಗಳ ಪ್ರವೇಶಕ್ಕೆ ನಿರ್ಬಂಧ 

ಬೆಂಗಳೂರು: ನಗರದ ಕಬ್ಬನ್‌ ಉದ್ಯಾನವನದಲ್ಲಿ ಸಾಕು ನಾಯಿಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಲು ಜುಲೈ 1ರಿಂದ ಉದ್ಯಾನದಲ್ಲಿ ಸಾಕು ನಾಯಿಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲು ತೋಟಗಾರಿಕೆ ಇಲಾಖೆ ತೀರ್ಮಾನಿಸಿದೆ. ಈ ಸಂಬಂಧ ತೋಟಗಾರಿಕೆ ಮತ್ತು ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಗಳು ಹಲವು ಸುತ್ತಿನ ಸಭೆ ನಡೆಸಿದ್ದು, ಮತ್ತೊಂದು ಸಭೆ ನಡೆಸಿ ಕಬ್ಬನ್‌ ಉದ್ಯಾನದಲ್ಲಿ ಸಾಕು ನಾಯಿಗಳ ಪ್ರವೇಶಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಿ ಆದೇಶ ಹೊರಡಿಸಲು ನಿರ್ಧರಿಸಲಾಗಿದೆ.

ಸಾಕು ನಾಯಿಗಳಿಂದ ಉದ್ಯಾನದಲ್ಲಿ ಸಾರ್ವಜನಿಕರಿಗೆ ಆಗುತ್ತಿದ್ದ ತೊಂದರೆಗೆ ಸಂಬಂಧಿಸಿದಂತೆ ಹೈಕೋರ್ಟ್‌ ತೀವ್ರ ಕಳವಳ ವ್ಯಕ್ತ ಪಡಿಸಿ, ಈ ಸಂಬಂಧ ಮಾರ್ಗಸೂಚಿಗಳನ್ನು ರಚಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶಿಸಿತ್ತು. ಈ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆ, ಸಾಕು ನಾಯಿಗಳನ್ನು ಉದ್ಯಾನ ಪ್ರವೇಶಕ್ಕೆ ಹಲವು ಮಾರ್ಗಸೂಚಿಗಳನ್ನು ಹೊರಡಿಸಿತ್ತು.

ಮಾರ್ಗಸೂಚಿಗಳ ಫಲಕಗಳನ್ನು ಎಲ್ಲ ದ್ವಾರಗಳಲ್ಲಿ ಅಳವಡಿಸಿತ್ತು. ಈ ಸಂಬಂಧ ಭದ್ರತಾ ಸಿಬ್ಬಂದಿಯಿಂದ ನಾಯಿ ಮಾಲಿಕರಿಗೆ ಸೂಚನೆ ನೀಡುತ್ತಿದ್ದರೂ, ಪ್ರಯೋಜನವಾಗಿರಲಿಲ್ಲ. ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಆದರೆ, ಶ್ವಾನಪ್ರಿಯರು ತಮ್ಮ ನಾಯಿಗಳನ್ನು ಹಿಡಿದಿಟ್ಟುಕೊಳ್ಳುವುದು, ಅವುಗಳಿಂದ ಉಂಟಾದ ತ್ಯಾಜ್ಯವನ್ನು ಸ್ವಚ್ಛಗೊಳಿಸುವ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದರು. ಇದರಿಂದ ಇತರೆ ವಾಯು ವಿಹಾರಿಗಳಿಗೆ ಕಿರಿಕಿರಿಯುಂಟು ಮಾಡುತ್ತಿತ್ತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಮಲ್ಪೆ ಬೀಚ್ ನಲ್ಲಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಮಹಿಳೆಯ ರಕ್ಷಣೆ – Vishwanews24

Leave a Reply