ಉಡುಪಿ :ತಳ್ಳುಗಾಡಿ ವ್ಯಾಪಾರಿಗಳು ವಿಕಲಚೇತನ ವೃದ್ಧನಿಗೆ ಅಪಹಾಸ್ಯ ಮಾಡಿರುವ ಖೇದಕರ ಘಟನೆ ಉಡುಪಿ ನಗರದಲ್ಲಿ ನಡೆದಿದೆ. ನಗರದಲ್ಲಿ ಅದೆಷ್ಟೋ ತಳ್ಳುಗಾಡಿಗಳು ಜನನಿಭಿಡ ಪ್ರದೇಶದಲ್ಲಿ ವ್ಯಾಪಾರ ಮಾಡುವ ದೂರುಗಳು ಬಂದ ಹಿನ್ನಲೆಯಲ್ಲಿ ನಗರಸಭೆ ಅಧಿಕಾರಿಗಳು ಅದೆಷ್ಟೋ ಬಾರಿ ತಳ್ಳುಗಾಡಿ ವಶಕ್ಕೆ ಪಡೆಯಲು ಮುಂದಾಗಿದ್ರು. ಆ ವೇಳೆ ತಳ್ಳುಗಾಡಿ ವ್ಯಾಪಾರಸ್ತರ ಗುಂಪು ಅಧಿಕಾರಿಗಳ ಮೇಲೆಯೇ ಹಲ್ಲೆ, ಪ್ರತಿಭಟನೆ ನಡೆಸಿರುವ ಘಟನೆ ನಡೆದಿತ್ತು ಆದರೆ ಅದೇ ವ್ಯಾಪಾರಸ್ತರಲ್ಲಿ ಕೆಲವರು ಜನರು ಓಡಾಡೋ ಸ್ಥಳದಲ್ಲಿ ತಳ್ಳಗಾಡಿಗಳನ್ನಿಟ್ಟು ವ್ಯಾಪಾರ ಮಾಡೋ ಜೊತೆಗೆ ಅಂಗವಿಕಲರನ್ನು ತಮಾಷೆ ಮಾಡುವುದು, ಜೊತೆಗೆ ಬಸ್ಸು ನಿಲ್ದಾಣಗಳಲ್ಲಿ ಓಡಾಡೋ ಯುವತಿಯರನ್ನು ಚುಡಾಯಿಸೋದು ಸಾಮಾನ್ಯವಾಗಿದೆ. ಹೀಗಾಗಿ ತಳ್ಳುಗಾಡಿ ವ್ಯಾಪಾರಿಗಳ ದುರ್ವರ್ತನೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೆ ತಳ್ಳುಗಾಡಿ ವ್ಯಾಪಾರಸ್ಥರಿಂದ ಅವಮಾನಕ್ಕೊಳಗಾದ ವೃದ್ಧ ಸಾರ್ವಜನಿಕ ಸ್ಥಳದಲ್ಲೇ ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ತಳ್ಳುಗಾಡಿ ವ್ಯಾಪಾರಸ್ಥರಿಗೆ ನಗರದೊಳಗೆ ಅವಕಾಶ ನೀಡಬಾರದು ಎಂದು ಒತ್ತಾಯವೂ ಕೇಳಿ ಬಂದಿದೆ.