ದ.ಕ.: ಆ. 24ರ ಶನಿವಾರ ಸೇರಿ ಮುಂದಿನ ಪ್ರತೀ ಶನಿವಾರ ಮಧ್ಯಾಹ್ನದ ಬಳಿಕ ಪೂರ್ತಿ ತರಗತಿ – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು:  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಮತ್ತು ಪ್ರವಾಹ ಸ್ಥಿತಿಯಿಂದ ಶಿಕ್ಷಣ ಸಂಸ್ಥೆಗಳಿಗೆ ರಜೆ ನೀಡಲಾಗಿದ್ದರಿಂದ ತರಗತಿ ಕೊರತೆಯನ್ನು ಭರ್ತಿ ಮಾಡುವ ಉದ್ದೇಶದಿಂದ ಇನ್ನು ಪ್ರತೀ ಶನಿವಾರ ಮಧ್ಯಾಹ್ನದ ಬಳಿಕವೂ ತರಗತಿಗಳನ್ನು ನಡೆಸುವಂತೆ ಶಿಕ್ಷಣ ಇಲಾಖೆಯು ಸಂಬಂಧಿಸಿದ ಶಾಲೆಗಳಿಗೆ ಸೂಚನೆ ನೀಡಿದೆ.

ಈ ವಿಶೇಷ ತರಗತಿಗಳು ಆಗಸ್ಟ್ 24ರಿಂದಲೇ ಪ್ರಾರಂಭಗೊಳ್ಳಲಿದೆ. ಆದರೆ ರವಿವಾರ ಯಾವುದೇ ತರಗತಿಗಳು ನಡೆಯುವುದಿಲ್ಲ ಎಂದು ದಕ್ಷಿಣ ಕನ್ನಡ ಡಿ.ಡಿ.ಪಿ.ಐ. ವೈ. ಶಿವರಾಮಯ್ಯ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಸುಳ್ಯ, ಪುತ್ತೂರು, ಬೆಳ್ತಂಗಡಿಯಲ್ಲಿ ಒಟ್ಟು 13 ಶನಿವಾರ, ಉಳಿದ ಕಡೆಗಳಲ್ಲಿ 12 ಶನಿವಾರ ಮಧ್ಯಾಹ್ನದ ತರಗತಿಗಳು ನಡೆಯಲಿವೆ ಎಂದು ಪ್ರಕಟನೆ ತಿಳಿಸಿದೆ.

ಜಾಹಿರಾತು

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಭಾರೀ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಕಾಣಿಸಿಕೊಂಡಿದ್ದ ಕಾರಣ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಢಿಲ್ ಅವರು ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಆಗಸ್ಟ್ ತಿಂಗಳ ಪ್ರಾರಂಭದಲ್ಲಿ ಜಿಲ್ಲೆಯ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದ್ದರು.
ಈ ಹಿನ್ನಲೆಯಲ್ಲಿ ವಿಶೇಷ ತರಗತಿಗಳು ಆಗಸ್ಟ್ 24ರಿಂದಲೇ ಪ್ರಾರಂಭಗೊಳ್ಳಲಿದೆ. ಜಿಲ್ಲೆಯಲ್ಲಿ ಕೆಲವು ತಾಲೂಕಿನಲ್ಲಿ ಆರು ದಿನ ಹಾಗೂ ಕೆಲವು ತಾಲೂಕಿನಲ್ಲಿ 5 ದಿನ ರಜೆ ನೀಡಲಾಗಿತ್ತು. ಒಂದು ದಿನದ ತರಗತಿ ಸರಿದೂಗಿಸಲು ಎರಡು ಶನಿವಾರ ತರಗತಿ ನಡೆಸಬೇಕಾಗುತ್ತದೆ ಹೀಗಾಗಿ ಮುಂದಿನ 10-12 ಶನಿವಾರ ತರಗತಿ ನಡೆಯಲಿದೆ. ಒಂದು ವೇಳೆ ಶನಿವಾರ ಸರ್ಕಾರಿ ರಜೆ ದಿನವಾದರೆ ತರಗತಿ ನಡೆಸಬೇಕಿಲ್ಲ. ಮತ್ತು ಭಾನುವಾರ ಯಾವುದೇ ತರಗತಿಗಳು ನಡೆಯುವುದಿಲ್ಲ ಎಂದು ದಕ್ಷಿಣ ಕನ್ನಡ ಡಿ.ಡಿ.ಪಿ.ಐ. ವೈ. ಶಿವರಾಮಯ್ಯ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.