ದರೋಡೆ ಪ್ರಕರಣ : ಮಣಿಪಾಲದಲ್ಲಿ ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ – ಗರುಡ ಗ್ಯಾಂಗ್ ಸದಸ್ಯ ಇಸಾಕ್ ಪರಾರಿ – vishwanews24
ದರೋಡೆ ಪ್ರಕರಣ : ಮಣಿಪಾಲದಲ್ಲಿ ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ – ಗರುಡ ಗ್ಯಾಂಗ್ ಸದಸ್ಯ ಇಸಾಕ್ ಪರಾರಿ ; ಪ್ರೇಯಸಿ ಬಂಧನ
ಉಡುಪಿ: ದರೋಡೆ ಪ್ರಕರಣವೊಂದರ ಸಂಬಂಧ ಮಣಿಪಾಲದಲ್ಲಿ ಮಂಗಳವಾರ ರಾತ್ರಿ ಸಿನಿಮೀಯ ರೀತಿಯಲ್ಲಿ ನಡೆದ ಪೊಲೀಸ್ ಕಾರ್ಯಾಚರಣೆ ವೇಳೆ ಕುಖ್ಯಾತ ಗರುಡ ಗ್ಯಾಂಗ್ ಸದಸ್ಯ ಇಸಾಕ್ ಹಲವು ವಾಹನಗಳಿಗೆ ಢಿಕ್ಕಿ ಹೊಡೆದು ತನ್ನ ಕಾರನ್ನು ಬಿಟ್ಟು ಪರಾರಿಯಾಗಿದ್ದು, ಕಾರಿನಲ್ಲಿದ್ದ ಆತನ ಗೆಳತಿ ಸುಜೈನ್ (25) ಳನ್ನು ಬಂಧಿಸಿ ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆಕೆಯನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾದ ದರೋಡೆ ಪ್ರಕರಣದ 2 ನೇ ಆರೋಪಿ ಇಸಾಕ್ ಪತ್ತೆಗಾಗಿ ಬೆಂಗಳೂರಿನ ಮಾದನಾಯಕನ ಹಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಸೋಮಶೇಖರ್ ಅವರು ಮಣಿಪಾಲಕ್ಕೆ ಆಗಮಿಸಿದ್ದರು. ಜಿಲ್ಲಾಧಿಕಾರಿ ಕಚೇರಿ ರಸ್ತೆ ಬಳಿಯ ಅಪಾರ್ಟ್ ಮೆಂಟ್ ಒಂದರಲ್ಲಿ ವಾಸವಿರುವ ಗೆಳತಿ ಸುಜೈನ್ ಮನೆಗೆ ಆರೋಪಿ ಬಂದಿರುವ ಬಗ್ಗೆ ಸುಳಿವು ಸಿಕ್ಕಿತ್ತು. ಸೋಮಶೇಖರ್ ಮತ್ತು ನಿರೀಕ್ಷಕ ನರೇಂದ್ರ ಬಾಬು ನೇತೃತ್ವದ ತಂಡ ಸುಜೈನ್ ಮನೆಯನ್ನು ಪತ್ತೆ ಮಾಡಿ ಆರೋಪಿ ಹೊರಬರುವುದನ್ನೇ ಕಾಯುತ್ತಿದ್ದರು. ರಾತ್ರಿ ಸುಮಾರು 8 ಗಂಟೆಗೆ ಸುಜೈನ್ ಹಾಗೂ ಆಕೆಯ ತಂಗಿ ಹತ್ತಿರದ ಮೊಬೈಲ್ ಅಂಗಡಿಗೆ ಹೋಗಿದ್ದರು.
ಈ ವೇಳೆ ನಕಲಿ ನೋಂದಣಿ ಸಂಖ್ಯೆಯಿದ್ದ ಕಪ್ಪು ಬಣ್ಣದ ಮಹೀಂದ್ರ ಥಾರ್ ವಾಹನದಲ್ಲಿ ವ್ಯಕ್ತಿಯೊಬ್ಬ ಆಗಮಿಸಿದ. ಆದರೆ ಅದು ಆರೋಪಿಯೇ ಎಂಬ ಬಗ್ಗೆ ಪೊಲೀಸರಿಗೆ ಖಚಿತತೆ ಇರಲಿಲ್ಲ. ಕೂಡಲೇ ಪೊಲೀಸರು ತಾವಿದ್ದ ವಾಹನದಲ್ಲಿ ಆ ವಾಹನವನ್ನು ಹಿಂಬಾಲಿಸಿದರು. ಈ ವೇಳೆ ಆ ವಾಹನ ಸ್ವಲ್ಪ ದೂರ ಹೋಗಿ ಯೂ ಟರ್ನ್ ತೆಗೆದು ಬಂದು ಜಿಲ್ಲಾಧಿಕಾರಿ ರಸ್ತೆಯ ಅರೇಬಿಯನ್ ಹೊಟೇಲ್ ಮೊಬೈಲ್ ಅಂಗಡಿಯ ಮುಂಭಾಗ ನಿಂತಿತು.
ಕಾಪು ಶ್ರೀ ಹೊಸ ಮಾರಿಗುಡಿ : ಕೆ. ವಾಸುದೇವ ಶೆಟ್ಟಿ ಅವರಿಗೆ ರಾಜರ್ಷಿ ಬಿರುದು ಪ್ರದಾನ – vishwanews24
ಆಗ ಸುಜೈನ್ ವಾಹನವನ್ನು ಹತ್ತಿದ್ದು, ಅದರಲ್ಲಿ ಆರೋಪಿ ಇಸಾಕ್ ಇದ್ದದ್ದು ಪೊಲೀಸರಿಗೆ ಖಚಿತವಾಗಿ ಆತನ ಬೆನ್ನು ಬಿದ್ದರು. ಇದನ್ನರಿತ ಆರೋಪಿ, ಪೊಲೀಸ್ ಸಿಬಂದಿ ವಿಶ್ವನಾಥ ಅವರಿಗೆ ಕಾರನ್ನು ಢಿಕ್ಕಿ ಹೊಡೆಸಿ ಕೊಲೆಗೆ ಯತ್ನಿಸಿದ. ಪರಿಣಾಮವಾಗಿ ಅವರು ಫುಟ್‌ಪಾತ್‌ಗೆ ಬಿದ್ದು ತೀವ್ರ ಗಾಯಗೊಂಡರು. ಈ ಸಂದರ್ಭ ನಡೆದ ಜಟಾಪಟಿಯಲ್ಲಿ ನಿರೀಕ್ಷಕ ನರೇಂದ್ರ ಬಾಬು, ಸಿಬಂದಿ ಕೇಶಾವನಂದ, ಬಾಲಾಜಿ ಸಿಂಗ್ ಮತ್ತು ರಾಯಗೊಂಡ ಅವರಿಗೂ ಗಾಯಗಳಾಗಿವೆ.
ಸರಣಿ ಅಪಘಾತ
ಅನಂತರ ಆರೋಪಿಯು ವಾಹನವನ್ನು ಅತಿ ವೇಗವಾಗಿ ರಿವರ್ಸ್ ನಲ್ಲಿ ಚಲಾಯಿಸಿದ. ಈ ಸಂದರ್ಭ ಕಾರು ಢಿಕ್ಕಿ ಹೊಡೆಯುವುದರಿಂದ ಸೋಮಶೇಖರ್ ಅವರು ಕೂದಲೆಳೆ ಅಂತರ ದಲ್ಲಿ ಪಾರಾದರು. ಬಳಿಕ ಅವರ ಕಾರಿಗೆ ಆರೋಪಿ ತನ್ನ ಕಾರನ್ನು ಢಿಕ್ಕಿ ಹೊಡೆಸಿ ಜಖಂಗೊಳಿಸಿದ. ರಿವರ್ಸ್‌ನಲ್ಲೇ ಕಾರನ್ನು ಓಡಿಸಿ ಅಲ್ಲಿದ್ದ ಎಸ್‌ಯುವಿ 700 ಕಾರಿಗೆ ಢಿಕ್ಕಿ ಹೊಡೆಸಿದ. ಪುನಃ ಕಾರನ್ನು ಅತಿವೇಗದಿಂದ ಚಲಾಯಿಸಿ ರಸ್ತೆ ಬದಿ ನಿಂತಿದ್ದ ಕ್ರೆಟಾ ಕಾರಿಗೆ ಢಿಕ್ಕಿ ಹೊಡೆದ.
ಮಣ್ಣಪಳ್ಳದಲ್ಲಿ ಆರೋಪಿ ಕಾರು ಪತ್ತೆ
ಹೀಗೆ ಸರಣಿ ಅಪಘಾತ ನಡೆಸಿದ ಬಳಿಕ ಆರೋಪಿ ಅಲ್ಲಿಂದ ಪರಾರಿಯಾದ. ಈ ವೇಳೆ ಪೊಲೀಸರು ಆತನ ವಾಹನವನ್ನು ಹಿಂಬಾಲಿಸಿದ್ದು, ಮಣ್ಣಂಪಳ್ಳ ಬಳಿ ಆರೋಪಿಯ ವಾಹನದ ಟಯರ್ ಪಂಕ್ಚರ್ ಆಯಿತು. ಕೂಡಲೇ ವಾಹನವನ್ನು ಮಾರ್ಗ ಮಧ್ಯೆ ನಿಲ್ಲಿಸಿ ಗೆಳತಿಯೊಂದಿಗೆ ಕತ್ತಲೆಯಲ್ಲಿ ತಪ್ಪಿಸಿಕೊಂಡ. ಈ ಸಂದರ್ಭ ಚೇಸಿಂಗ್ ಬಗ್ಗೆ ಪೊಲೀಸರಿಗೂ ಮತ್ತು ಸಾರ್ವಜನಿಕರಿಗೂ ವಾಗ್ವಾದ ನಡೆಯಿತು. ಇದು ಆರೋಪಿಗೆ ತಪ್ಪಿಸಿಕೊಳ್ಳಲು ಅನುಕೂಲವಾಯಿತು. ಪೊಲೀಸರು ಆ ವಾಹನವನ್ನು ವಶಕ್ಕೆ ಪಡೆದಿದ್ದು, ಅದು ಬಾಡಿಗೆಗೆ ಪಡೆದ ವಾಹನವಾಗಿದೆ.
ಕಾಪು ಶ್ರೀ ಹೊಸ ಮಾರಿಗುಡಿ : ಮಾರಿಯಮ್ಮನ ಪ್ರತಿಷ್ಠಾಪನೆ ಮಹಾ ಬ್ರಹ್ಮಕಲಶೋತ್ಸವ ಸಂಪನ್ನ – vishwanews24
ಇಂದ್ರಾಳಿಯಲ್ಲಿ ಯುವತಿ ವಶಕ್ಕೆ
ಮೊದಲೇ ಲೊಕೇಷನ್ ಆಧಾರದಲ್ಲಿ ಆರೋಪಿಯ ಪ್ರೇಯಸಿಯ ಬೆನ್ನು ಬೆದ್ದಿದ್ದ ಪೊಲೀ ಸರಿಗೆ ಆಕೆ ಇಂದ್ರಾಳಿಯಲ್ಲಿರುವ ಬಗ್ಗೆ ಮಾಹಿತಿ ಲಭಿಸಿತು. ಅಲ್ಲಿಗೆ ತೆರಳಿದಾಗ ತನ್ನ ಅಕ್ಕನ ಮನೆಯಲ್ಲಿ ಆಕೆ ಇದ್ದದ್ದು ತಿಳಿದು, ರಾತ್ರಿ 2 ಗಂಟೆ ವೇಳೆಗೆ ಆಕೆಯನ್ನು ಬಂಧಿಸಲಾಯಿತು.
ಕುಂಜಿಬೆಟ್ಟು ಗ್ಯಾಂಗ್‌ವಾರ್ ಸೂತ್ರಧಾರ
ಆರೋಪಿ ಇಸಾಕ್ ಮೂಲತಃ ಬೈಂದೂರಿನವನು. ಮಾದಕ ವಸ್ತು ಪೂರೈಕೆ, ಹಲ್ಲೆ, ದರೋಡೆ ಹಲವು ಪ್ರಕರಣಗಳು ಈತನ ಮೇಲಿವೆ. ಕಳೆದ ವರ್ಷ ಉಡುಪಿಯ ಕುಂಜಿಬೆಟ್ಟು ಬಳಿ ನಡೆದ ಗ್ಯಾಂಗ್‌ವಾರ್‌ನ ಸೂತ್ರ ಧಾರನಾಗಿದ್ದ. ವಾಹನದಲ್ಲಿ ರಾದ್ಧಾಂತ ನಡೆಸಿ, ತಲವಾರು ಝಳಪಿಸಿ ಹಲ್ಲೆ ನಡೆಸಿದ್ದ. ಉಡುಪಿ, ಮಂಗಳೂರು ಸಹಿತ ವಿವಿಧ ಜಿಲ್ಲೆಗಳಲ್ಲಿ ಹಲವು ಪ್ರಕರಣಗಳಿದ್ದು, ಪೊಲೀ ಸರು ಈತನ ಮೇಲೆ ನಿಗಾ ಇಟ್ಟಿದ್ದರು.
ಕತ್ತಿ, ತಲ್ವಾರ್ ವಶಕ್ಕೆ: ಆರೋಪಿಯ ಕಾರಿನಲ್ಲಿ ಬ್ಯಾಗೊಂದು ಪತ್ತೆಯಾಗಿದ್ದು, ಅದರಲ್ಲಿ ತಲ್ವಾರು, ಕತ್ತಿ, ಮಾದಕ ವಸ್ತುಗಳು ಸಹಿತ ಸುಮಾರು 10ರಿಂದ 15 ನಿಷ್ಕ್ರಿಯ ಸಿಮ್ ಕಾರ್ಡ್‌ಗಳು ಪತ್ತೆಯಾಗಿವೆ. ಪೊಲೀಸರು ಇವೆಲ್ಲವನ್ನೂ ವಶಕ್ಕೆ ಪಡೆದಿದ್ದಾರೆ.
ಕಾಪು ಶ್ರೀ ಹೊಸ ಮಾರಿಗುಡಿ : ಮಾರಿಯಮ್ಮನ ಪ್ರತಿಷ್ಠಾಪನೆ ಮಹಾ ಬ್ರಹ್ಮಕಲಶೋತ್ಸವ ಸಂಪನ್ನ – vishwanews24
