ದೇವಾಲಯಗಳಲ್ಲಿ ಸಂಪ್ರದಾಯ ಹಾಗೂ ಶಿಷ್ಟಾಚಾರ ಪಾಲಿಸುವ ಉದ್ದೇಶದಿಂದ ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ನಿಯಮ ಜಾರಿಗೆ : ಕೋಟ ಶ್ರೀನಿವಾಸ ಪೂಜಾರಿ -Vishwanews24
ಬೆಂಗಳೂರು: ದೇವಾಲಯಗಳಲ್ಲಿ ಸಂಪ್ರದಾಯ ಹಾಗೂ ಶಿಷ್ಟಾಚಾರ ಪಾಲಿಸುವ ಉದ್ದೇಶದಿಂದ ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ನಿಯಮ ಜಾರಿಗೆ ತರುವ ಕುರಿತು ರಾಜ್ಯ ಸರಕಾರ ಚಿಂತನೆ ನಡೆಸಿದೆ ಎಂದು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಇಂದು ವಿಧಾನಸೌಧದಲ್ಲಿ ಮಾತನಾಡಿದ ಅವರು, ವಸ್ತ್ರಸಂಹಿತೆ ಬಗ್ಗೆ ಅನೇಕ ಪ್ರಸ್ತಾಪಗಳು ಬಂದಿದ್ದು, ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಕೇರಳ ಗುರುವಾಯೂರು ಸೇರಿದಂತೆ ದಕ್ಷಿಣ ಭಾರತದ ಬಹುತೇಕ ದೇವಾಲಯಗಳಲ್ಲಿ ಭಕ್ತರಿಗೆ ವಸ್ತ್ರ ಸಂಹಿತೆ ಕಡ್ಡಾಯವಾಗಿದೆ. ಇನ್ನು ಇತ್ತೀಚಿಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿಯೂ ಗರ್ಭಗುಡಿ ಪ್ರವೇಶಿಸಲು ವಸ್ತ್ರ ಸಂಹಿತೆ ಅನುಸರಿಸುವುದು ಕಡ್ಡಾಯ ಎಂಬ ನಿಯಮ ಜಾರಿಗೆ ತರಲಾಗಿದೆ. ಇದೀಗ ರಾಜ್ಯದಲ್ಲಿ ಈ ನಿಯಮವನ್ನು ಜಾರಿಗೆ ತರಬೇಕು ಎಂಬ ಕೂಗು ಕೇಳಿಬಂದಿದೆ ಎಂದು ಹೇಳಿದರು.
ಇನ್ನು ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ವಸ್ತ್ರ ಸಂಹಿತೆ ಜಾರಿಗೆ ತರಬೇಕು ಎಂದು ವಿಎಚ್?ಪಿ, ಬಜರಂಗದಳ ಆಗ್ರಹಿಸಿತ್ತು. ಭಕ್ತರ ದಿರಿಸಿಗೆ ಆಕ್ಷೇಪಿಸಿ ಈ ಬಗ್ಗೆ ಮುಜರಾಯಿ ಇಲಾಖೆಗೆ ಮನವಿ ಮಾಡಿತ್ತು.ಈ ಕುರಿತು ಮಾತನಾಡಿದ ಸಚಿವರು, ವಸ್ತ್ರ ಸಂಹಿತೆ ಕುರಿತು ಹಲವು ದೇವಸ್ಥಾನಗಳಿಂದ ಪ್ರಸ್ತಾವ ಬಂದಿವೆ. ಜೊತೆಗೆ ಸಂಘ ಸಂಸ್ಥೆಗಳಿಂದಲೂ ಪ್ರಸ್ತಾವ ಬಂದಿವೆ. ಈ ಬಗ್ಗೆ ಪರಿಶೀಲನೆ ನಡೆಸಬೇಕು. ನಂತರ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಈ ಕುರಿತು ತೀರ್ಮಾನ ಮಾಡುತ್ತೇವೆ ಎಂದು ಅವರು ತಿಳಿಸಿದರು. ಜನವರಿ 20, 21ರಂದು ಧಾರ್ಮಿಕ ಪರಿಷತ್ ಸಭೆ ಇದೆ. ಈ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ ತೀರ್ಮಾಣ ಕೈಗೊಳ್ಳಲಾಗುವುದು.
