‘ದೇಶದಲ್ಲಿಯೇ ಕರ್ನಾಟಕ ರಾಜ್ಯವನ್ನು ನಂ.1 ಸ್ಥಾನಕ್ಕೆ ಏರಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇನೆ : ಕುಮಾರಸ್ವಾಮಿ -Vishwanews24

ಜಿಲ್ಲೆ, ರಾಜ್ಯ ನ್ಯೂಸ್

ಬೀದರ: ‘ದೇಶದಲ್ಲಿಯೇ ಕರ್ನಾಟಕ ರಾಜ್ಯವನ್ನು ನಂ.1 ಸ್ಥಾನಕ್ಕೆ ಏರಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇನೆ’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಬಸವಕಲ್ಯಾಣ ತಾಲೂಕು ಉಜಳಂಬ ಗ್ರಾಮದಲ್ಲಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಸಂಕಲ್ಪ ಹೊಂದಿದ್ದು, ಸಮಾಜದ ಎಲ್ಲ ವರ್ಗದ ಜನರ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಎಲ್ಲ ಕೆಳವರ್ಗದ ಜನರಿಗೆ ರಕ್ಷಣೆ ನೀಡುವ ಕೆಲಸ ಮಾಡಲಾಗುತ್ತಿದೆ. ಮೈತ್ರಿ ಸರ್ಕಾರದ ಮೇಲೆ ರಾಜ್ಯದ ಜನರು ನಂಬಿಕೆಇಡಬೇಕು. ಸರ್ಕಾರ ಸುಭದ್ರವಾಗಿ ಆಡಳಿತ ನೀಡಲಿದೆ. ಆದರೆ, ಕೆಲವರು ಸರ್ಕಾರ ರಚನೆ ಆದಾಗಿನಿಂದ ಬೀಳಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಅವರ ಪ್ರಯತ್ನಗಳು ಫಲ ನೀಡುವುದಿಲ್ಲ ಎಂದರು.

ಎಲ್ಲ ಜಿಲ್ಲೆಗಳಿಗೂ ಸಮಾನ ಅನುದಾನ ಹಂಚಿಕೆ ಮಾಡುತ್ತಿದ್ದರೂ ಕೂಡ ವಿರೋಧ ಪಕ್ಷದವರು 2-3 ಜಿಲ್ಲೆಗಳಿಗೆ ಸೀಮಿತ ಮುಖ್ಯಮಂತ್ರಿ ಎಂದು ಆರೋಪಿಸುತ್ತಿರುವುದು ಮನಸ್ಸಿಗೆ ನೋವುಂಟು ಮಾಡಿದೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದ ಎಲ್ಲ ರೈತರ ಸಾಲಮನ್ನಾ ಮಾಡಲಾಗಿದೆ. ಅದೇ ರೀತಿ, ಬೀದರ ಜಿಲ್ಲೆ ಒಂದಕ್ಕೆ ಒಂದು ವರ್ಷದಲ್ಲಿ 2,000 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದೇನೆ. ಅಲ್ಲದೆ, ರಾಯಚೂರು ಜಿಲ್ಲೆಗೆ 3,800 ಕೋಟಿ ರೂ., ಯಾದಗರಿ ಜಿಲ್ಲೆಗೆ 3 ಸಾವಿರ ಕೋಟಿ ರೂ. ಅನುದಾನ ನೀಡಲಾಗುತ್ತಿದ್ದು, ಈ ಮೂಲಕ ವಿವಿಧ ಯೋಜನೆಗಳ ಅನುಷ್ಠಾನ ಮಾಡಲಾಗುತ್ತಿದೆ. ಆದರೂ, ವಿರೋಧ ಪಕ್ಷದವರು ತಾರತಮ್ಯದ ಆರೋಪ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.