ನನಗೂ ಸೇರಿದಂತೆ ಜೆಡಿಎಸ್ ರಾಜ್ಯಾಧ್ಯಕ್ಷರಿಗೂ ಬಿಜೆಪಿಗೆ ಬರುವಂತೆ ಐವತ್ತು ಕೋಟಿಯವರೆಗೂ ಆಮಿಷ ನೀಡಲಾಗಿತ್ತು : ಜೆಡಿಎಸ್ ಶಾಸಕ ಲಿಂಗೇಶ್ -Vishwanews24
ಹಾಸನ: ಬೇಲೂರಿನ ಜೆಡಿಎಸ್ ಶಾಸಕ ಲಿಂಗೇಶ್ ಗುಜರಾತ್ನ ಇಬ್ಬರು ಮಾರ್ವಾಡಿಗಳ ಕೈಯಲ್ಲಿ ದೇಶ ನಲುಗುತ್ತಿದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಬೇಲೂರಿನಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಲಿಂಗೇಶ್, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ವಿರುದ್ಧ ಹರಿಹಾಯ್ದಿದ್ದಾರೆ. “ಗುಜರಾತ್ನ ಇಬ್ಬರು ಮಾರ್ವಾಡಿಗಳ ಕೈಯಲ್ಲಿ ದೇಶ ನಲುಗುತ್ತಿದೆ. ಉತ್ತರ ಭಾರತೀಯರ ಕೈಯಲ್ಲಿ ಸರ್ಕಾರಗಳು ನಲುಗುತ್ತಿವೆ. ದಕ್ಷಿಣ ಭಾರತೀಯರನ್ನು ಕೇಂದ್ರ ಸರ್ಕಾರ ಕಡೆಗಣಿಸುತ್ತಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಜಿ ಸಚಿವ ಡಿಕೆಶಿ ಬಂಧನವನ್ನು ಖಂಡಿಸಿದ ಜೆಡಿಎಸ್ ಶಾಸಕ, ಇಡಿಯನ್ನು ಬಳಸಿಕೊಂಡು ಡಿಕೆ ಶಿವಕುಮಾರ್ ಅವರನ್ನು ಜೈಲಿಗೆ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಸಾಂವಿಧಾನಿಕ ಸಂಸ್ಥೆಗಳಿಂದ ವಿರೋಧ ಪಕ್ಷಗಳನ್ನು ಹತ್ತಿಕ್ಕಲಾಗುತ್ತಿದೆ. ಸ್ವಾಯತ್ತ ಸಂಸ್ಥೆ ಇಡಿಯನ್ನು ಬಳಸಿಕೊಂಡು ಡಿಕೆ ಶಿವಕುಮಾರ್ ಅವರನ್ನು ಜೈಲಿಗೆ ಹಾಕಿದ್ದಾರೆ,” ಎಂದು ವಾಗ್ದಾಳಿ ನಡೆಸಿದರು.
ಆಪರೇಷನ್ ಕಮಲದ ಬಗ್ಗೆ ಲಿಂಗೇಶ್ ವೇದಿಕೆಯಲ್ಲೇ ಹೊಸ ಬಾಂಬ್ ಸಿಡಿಸಿದರು. “ಬಿಜೆಪಿಯವರು ನನಗೆಮಾತ್ರ ಅಲ್ಲ, ಮಾಜಿ ಸಚಿವ ಹೆಚ್.ಡಿ ರೇವಣ್ಣನವರಿಗೂ ಆಮಿಷ ಒಡ್ಡಿದ್ದರು. ಉಪಮುಖ್ಯ ಮಂತ್ರಿಯಾಗಿ ಮಾಡುವುದಾಗಿ ಆಮಿಷ ನೀಡಿದ್ದರು. ಐದು ಕೋಟಿ ಅಲ್ಲ, ಐವತ್ತು ಕೋಟಿಯವರೆಗೂ ನನಗೂ ಸೇರಿದಂತೆ ಜೆಡಿಎಸ್ ರಾಜ್ಯಾಧ್ಯಕ್ಷರಿಗೂ ಬಿಜೆಪಿಗೆ ಬರುವಂತೆ ಆಮಿಷ ನೀಡಲಾಗಿತ್ತು,” ಎಂದರು.
