ನನಗೆ ಮುಖ್ಯಮಂತ್ರಿಯಾಗಲು ಇಷ್ಟವಿರಲಿಲ್ಲ: ಕುಮಾರಸ್ವಾಮಿ
ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಸಮ್ಮಿಶ್ರ ಸರಕಾರವು ಆಸ್ತಿತ್ವದಲ್ಲಿದ್ದು, ಹೆಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. ಇದೀಗ ಮುಖ್ಯಮಂತ್ರಿ ಸ್ಥಾನದ ಕುರಿತು ಮಾತನಾಡಿದ ಕುಮಾರಸ್ವಾಮಿ, ನನಗೆ ಮುಖ್ಯಮಂತ್ರಿಯಾಗಲು ಇಷ್ಟ ಇರಲಿಲ್ಲ. ಆದರೆ ಅನಿವಾರ್ಯ ಸಂದರ್ಭಗಳು ಸೃಷ್ಟಿಯಾದ ಕಾರಣ ನಾನು ಸಮ್ಮಿಶ್ರ ಸರಕಾರದ ಈ ಹುದ್ದೆಯನ್ನು ಸ್ವೀಕರಿಸಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಗಾಂಧಿ ಭವನದಲ್ಲಿ ಸೋಮವಾರ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದಲ್ಲಿ ನಾನು ಮುಖ್ಯಮಂತ್ರಿ ಆಗುವುದು ದೇವೇಗೌಡರಿಗೂ ಬೇಡವಾಗಿತ್ತು. ನನ್ನ ಮಗನ ಆರೋಗ್ಯ ಸರಿ ಇಲ್ಲ. ಎರಡು ಬಾರಿ ಹಾರ್ಟ್ ಆಪರೇಷನ್ ಆಗಿದೆ. ನಿಮ್ಮಲ್ಲೇ ಯಾರನ್ನಾದರೂ ಮುಖ್ಯಮಂತ್ರಿಯನ್ನಾಗಿ ಮಾಡಿ ಎಂದು ತಂದೆಯವರು ಹೇಳಿದ್ದರು.
ಆದರೆ, ಇಲ್ಲ ಕುಮಾರಸ್ವಾಮಿಯವರೇ ಮುಖ್ಯಮಂತ್ರಿ ಆಗಬೇಕು ಎಂದು ಕಾಂಗ್ರೆಸ್ ಮುಖಂಡರು ಪಟ್ಟು ಹಿಡಿದರು. ಹಾಗಾಗಿ, ಅನಿವಾರ್ಯ ಸಂದರ್ಭದಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ನಾನು ಮುಖ್ಯಮಂತ್ರಿ ಆಗಿದ್ದೇನೆ ಎಂದರು. ಭ್ರಷ್ಟಾಚಾರ ಆರಂಭವಾಗುವುದಕ್ಕೆ ವರ್ಗಾವಣೆ ಮೂಲ ಬೇರು. ವಿಧಾನಸೌಧದಲ್ಲಿ ವರ್ಗಾವಣೆ ಧಂದೆಗೆ ಮಧ್ಯವರ್ತಿಗಳಿದ್ದಾರೆ. ಈ ಜಾಲ ಬಹಳ ವ್ಯವಸ್ಥಿತವಾಗಿ ಮತ್ತು ಅಷ್ಟೇ ಗಟ್ಟಿಯಾಗಿದೆ. ಆದಾಗ್ಯೂ ಈ ಭ್ರಷ್ಟಾಚಾರದ ಕಡಿವಾಣಕ್ಕೆ ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತೇನೆ ಎಂದರು.
