ನವೆಂಬರ್ 17ರಂದು ಸಿಜೆಐ ಗೊಗೊಯಿ ನಿವೃತ್ತಿ , ನೂತನ ಸಿಜೆಐ ಆಗಿ ಶರದ್ ಅರವಿಂದ್ ಬೊಬ್ಡೆ ಅಧಿಕಾರ ಸ್ವೀಕಾರ -Vishwanews24
ಹೊಸದಿಲ್ಲಿ, : ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ) ರಂಜನ್ ಗೊಗೊಯಿ ನವೆಂಬರ್ 17ರಂದು ಸೇವಾನಿವೃತ್ತಿ ಹೊಂದಲಿದ್ದಾರೆ. ನ.15ರಂದು ಅವರು ಸುಪ್ರೀಂಕೋರ್ಟ್‌ನಲ್ಲಿ ಅಂತಿಮ ಬಾರಿಗೆ ಕಲಾಪ ನಿರ್ವಹಿಸಿದ್ದಾರೆ.
2018ರ ಅಕ್ಟೋಬರ್ 3ರಿಂದ ಸಿಜೆಐ ಕರ್ತವ್ಯ ನಿರ್ವಹಿಸಿದ್ದ ಗೊಗೊಯಿ ತಮ್ಮ ಕಾರ್ಯಾವಧಿಯಲ್ಲಿ ಹಲವು ಐತಿಹಾಸಿಕ ತೀರ್ಪುಗಳನ್ನು ಪ್ರಕಟಿಸಿದ್ದಾರೆ. ಇದರಲ್ಲಿ ಅತೀ ಸೂಕ್ಷ್ಮ ವ್ಯಾಜ್ಯವಾಗಿದ್ದ ಅಯೋಧ್ಯೆ ಪ್ರಕರಣ, ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರಿಗೂ ಪ್ರವೇಶಾವಕಾಶ, ರಫೇಲ್ ಯುದ್ಧವಿಮಾನ ಪ್ರಕರಣ ಮತ್ತು ಅಸ್ಸಾಂನ ಎನ್‌ಆರ್‌ಸಿ ಪ್ರಕರಣ ಪ್ರಮುಖವಾದುದು.
ದೇಶದ 46ನೇ ಸಿಜೆಐ ಆಗಿ ನೇಮಕವಾಗಿದ್ದ ಗೊಗೊಯಿ ನಿವೃತ್ತರಾದ ಬಳಿಕ ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಅರವಿಂದ್ ಬೊಬ್ಡೆ ನೇಮಕವಾಗಿದ್ದು, ನವೆಂಬರ್ 18 ರಂದು ಮುಖ್ಯ ನ್ಯಾಯಮೂರ್ತಿಯಾಗಿ ಬೊಬ್ಡೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಮಹಾರಾಷ್ಟ್ರದ ನಾಗ್ಪುರದಲ್ಲಿ ಏಪ್ರಿಲ್ 24, 1956ರಂದು ಜನಿಸಿದ ಬೊಬ್ಡೆ ಅವರು ನಾಗ್ಪುರ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದಾರೆ.ಮಹಾರಾಷ್ಟ್ರ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದಾರೆ. 2000ರ ಮಾರ್ಚ್ 29ರಂದು ಬಾಂಬೆ ಹೈಕೋರ್ಟಿನಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿ ಅಧಿಕಾರ ವಹಿಸಿಕೊಂಡರು. 2012ರಲ್ಲಿ ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಾಧೀಶರಾದರು. 2013ರ ಏಪ್ರಿಲ್ ರಲ್ಲಿ ಸುಪ್ರೀಂಕೋರ್ಟಿನ ನ್ಯಾಯಮೂರ್ತಿಗಳಾಗಿ ಬಡ್ತಿ ಪಡೆದಿದ್ದಾರೆ.
