ನಾನು ಈ ಹಿಂದೆಯೇ ಸಾಯಬೇಕಿತ್ತು,ದೇವರ ಆಶೀರ್ವಾದದಿಂದ ಬದುಕಿ ಬಂದಿದ್ದೇನೆ : ಸಿಎಂ ಕುಮಾರಸ್ವಾಮಿ
ಮಂಡ್ಯ:ನಾನು ಯಾವಾಗ ಸಾಯುತ್ತೇನೋ ಗೊತ್ತಿಲ್ಲ. ಇಸ್ರೇಲ್ ಗೆ ಹೋಗಿದ್ದಾಗಲೇ ಸಾಯಬೇಕಿತ್ತು. ಆದರೆ ಬದುಕಿ ಬಂದಿದ್ದೇನೆ. ನಾನು ಎಷ್ಟು ದಿನ ಬದುಕುತ್ತೇನೆ ಎನ್ನುವುದು ಮುಖ್ಯವಲ್ಲ.ಇದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮಳವಳ್ಳಿಯಲ್ಲಿ ಹೇಳಿದ ಮಾತು.
ಶುಕ್ರವಾರ ಮಂಡ್ಯ ಜಿಲ್ಲೆಯ ಮಳವಳ್ಳಿ ಪ್ರಚಾರದ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಭಾವುಕರಾದ ಅವರು, ನಾನು ಈ ಹಿಂದೆಯೇ ಸಾಯಬೇಕಿತ್ತು. ಆದರೆ ದೇವರ ಆಶೀರ್ವಾದದಿಂದ ಬದುಕಿ ಬಂದಿದ್ದೇನೆ. ನಾನು ಎಷ್ಟು ದಿನ ಬದುಕಿರುತ್ತೇನೆ ಎನ್ನುವುದು ನನಗೆ ಗೊತ್ತಿಲ್ಲ. ನಾನು ಬದುಕಿರುವವರೆಗೂ ಜನರ ಸೇವೆಯನ್ನು ಮಾಡುತ್ತೇನೆ ಎಂದರು.
ಜನರ ಮೇಲೆ ನನಗಿರುವ ಪ್ರೀತಿಯನ್ನು ಹಾಳು ಮಾಡಲು ಈ ಜನ್ಮದಲ್ಲಿ ಯಾರಿಗೂ ಸಾಧ್ಯವಿಲ್ಲ. ನಾನು ಬದುಕಿರುವುದೇ ನಿಮ್ಮಂತಹವರ ಸೇವೆಗೆ. ನಾನು ಹಣ ಸಂಪಾದಿಸಬೇಕಿಲ್ಲ. ಹಣ ಸಂಪಾದನೆ ಮಾಡುವುದು ನನ್ನ ಉದ್ದೇಶವೂ ಅಲ್ಲ. ಎಷ್ಟು ದಿನ ಬದುಕುತ್ತೇನೆ ಎಂಬುದೂ ಮುಖ್ಯವಲ್ಲ. ದೇವರು ನನಗೆ ಕೊಟ್ಟಿರುವ ಈ ಅಧಿಕಾರವನ್ನು ಜನರ ಶ್ರೇಯೋಭಿವೃದ್ಧಿಗೆ ಬಳಸಿ, ಪ್ರತಿಯೊಂದು ಕುಟುಂಬವನ್ನು ಯಾವ ರೀತಿ ಬದುಕಿಸುತ್ತೇನೆ ಎಂಬುದೇ ನನ್ನ ಮುಂದಿರುವ ಸವಾಲು ಎಂದು ಹೇಳಿದರು.
ನಾನು ಮಾಧ್ಯಮಗಳಿಗೆ ಹೆದರುವುದಿಲ್ಲ. ನನ್ನನ್ನು ಹೆದರಿಸಲು ಮಾಧ್ಯಮಗಳಿಗೆ ಸಾಧ್ಯವಿಲ್ಲ. ಮಾಧ್ಯಮಗಳೆಲ್ಲವೂ ನನ್ನ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ. ನಾನು ಏನು ಮಾತನಾಡಿದರೂ ಅದನ್ನು ತಿರುಚಿ ಬರೆಯುತ್ತಾರೆ. ಎಲ್ಲರೂ ಈ ರೀತಿಯಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ. ಮಾಧ್ಯಮಗಳು ನನ್ನ ಜೀವನದ ಜತೆ ಚೆಲ್ಲಾಟವಾಡುತ್ತಿವೆ. ನಿಮ್ಮ ಮನೆ ಟಿವಿ ತೆಗೆದಾಕಿ ಅಂತಾ ಕೆಲವು ಡಾಕ್ಟರ್ಗಳು ನನಗೆ ಸಲಹೆ ನೀಡಿದ್ದಾರೆ ಎಂದರು.

