ನಾನು ಬಿಜೆಪಿಗೆ ಬಂದು ಅವರ ಮುಲಾಜಿಗೆ ಸಿಲುಕಿ ತಪ್ಪು ಮಾಡಿದೆ ಎನ್ನಿಸುತ್ತಿದೆ : ಶಾಸಕ ಗೂಳಿಹಟ್ಟಿ ಶೇಖರ್ ಅಸಮಾಧಾನ -Vishwanews24
ಬೆಂಗಳೂರು:ನನಗೆ ಸಚಿವ ಸಂಪುಟದಲ್ಲಿ ಅವಕಾಶ ಸಿಗಲಿದೆ ಎಂಬ ನಂಬಿಕೆಯೇ ಹೋಗಿದೆ. ನಾನು ಬಿಜೆಪಿಗೆ ಬಂದು ಅವರ ಮುಲಾಜಿಗೆ ಸಿಲುಕಿ ತಪ್ಪು ಮಾಡಿದೆ ಎನ್ನಿಸುತ್ತಿದೆ ಎಂದು ಮಾಜಿ ಸಚಿವ ಹಾಗೂ ಹೊಸದುರ್ಗ ಕ್ಷೇತ್ರದ ಶಾಸಕ ಗೂಳಿಹಟ್ಟಿ ಶೇಖರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದ ಅವರು, 2008ರಲ್ಲಿ ನನಗೆ ಅನ್ಯಾಯವಾಗಿತ್ತು. ಈ ಬಾರಿ ಅದನ್ನು ಸರಿಪಡಿಸುತ್ತಾರೆ ಎಂಬ ನಂಬಿಕೆ ಇತ್ತು. ಆದರೆ ನನ್ನನ್ನು ನಿರ್ಲಕ್ಷಿಸಲಾಗಿದೆ. ಹಾಗಾಗಿ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.
ನನಗೆ ಯಾವುದೇ ಆಸೆ ಮತ್ತು ನಿರೀಕ್ಷೆಗಳು ಇಲ್ಲದಂತಾಗಿದೆ. ನನಗೆ ಮುಂದಿನ ದಿನಗಳಲ್ಲಿ ಸಂಪುಟದಲ್ಲಿ ಅವಕಾಶ ಸಿಗಬಹುದು ಎಂಬ ನಂಬಿಕೆಯೇ ಉಳಿದಿಲ್ಲ.
ನನ್ನನ್ನು ಸಚಿವ ಸ್ಥಾನದಿಂದ ಕೈಬಿಡಲಾಯಿತು. ನಂತರದ ಬೆಳವಣಿಗೆಗಳಲ್ಲಿ ಯಡಿಯೂರಪ್ಪ ಅವರನ್ನು ನಂಬಿ ಬಿಜೆಪಿ ಸೇರ್ಪಡೆಯಾದೆ.ಆರ್. ಅಶೋಕ್ ಟಿಕೆಟ್ ಕೊಡಿಸಿದರು. ನಾನು ಒಬ್ಬರನ್ನು ನಂಬಿದ ಮೇಲೆ ಸದಾ ಅವರ ಜೊತೆ ನಿಲ್ಲುತ್ತೇನೆ. ಹಾಗಾಗಿ ಬಿಜೆಪಿ ಬಿಟ್ಟು ಹೋಗುವುದಿಲ್ಲ ಎಂದರು.
ನಾನು ಯಾರಿಗೂ ಹೆದರುವುದಿಲ್ಲ. ಪಕ್ಷ ಬಿಟ್ಟು ಹೋಗುವುದಾದರೆ ಧೈರ್ಯವಾಗಿ ಹೇಳಿಯೇ ಹೋಗುತ್ತೇನೆ. ಯಾರ ಮುಲಾಜಿನಲ್ಲೂ ನಾನು ಬದುಕಿಲ್ಲ. ಕ್ಷೇತ್ರದ ಜನ ನನಗೆ ಊಟ ಹಾಕಿ, ಹಣ ನೀಡಿ ಮತ ಹಾಕಿ ಗೆಲ್ಲಿಸಿದ್ದಾರೆ. ಅವರಿಗಷ್ಟೇ ನಾನು ಹೆದರುತ್ತೇನೆ. ಸಚಿವ ಸ್ಥಾನ ಕೊಟ್ಟರೆ ಸಂತೋಷ, ಕೊಡದಿದ್ದರೆ ನನ್ನ ಪಾಡಿಗೆ ನಾನು ಕೆಲಸ ಮಾಡಿಕೊಂಡಿರುತ್ತೇನೆ ಎಂದರು.
