ನಿರ್ಮಲಾ ಸೀತಾರಾಮನ್ ಮೇ.14 ರಂದು ಉಡುಪಿಗೆ – Vishwanews24
ನಿರ್ಮಲಾ ಸೀತಾರಾಮನ್ ಮೇ.14 ರಂದು ಉಡುಪಿಗೆ
ಉಡುಪಿ : ಕುಕ್ಕಿಕಟ್ಟೆಯ ಶ್ರೀಕೃಷ್ಣ ಬಾಲನಿಕೇತನದಲ್ಲಿ ನಿರ್ಮಾಣಗೊಂಡಿರುವ ಶ್ರೀವಿಶ್ವೇಶ ತೀರ್ಥ ಸೇವಾಧಾಮದ ಉದ್ಘಾಟನಾ ಸಮಾರಂಭ ಮೇ.14 ರಂದು ಮಧ್ಯಾಹ್ನ 2.30 ಕ್ಕೆ ನಡೆಯಲಿದೆ ಎಂದು ಕುಕ್ಕಿಕಟ್ಟೆಯ ಶ್ರೀ ಕೃಷ್ಣ ಸೇವಾಧಾಮ ಟ್ರಸ್ಟ್ ನ ಕಾರ್ಯದರ್ಶಿ ರಾಮಚಂದ್ರುಪಾದ್ಯಾಯ ತಿಳಿಸಿದ್ದಾರೆ.
ಈ ಬಗ್ಗೆ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಈ ನೂತನ ವಿಶ್ವೇಶ ತೀರ್ಥ ಸೇವಾಧಾಮ ಕಟ್ಟಡವನ್ನು ರಾಜ್ಯಸಭಾ ಸದಸ್ಯೆ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಉದ್ಘಾಟಿಸಲಿದ್ದಾರೆ. ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಆಶಿರ್ವಚನ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಉಡುಪಿಯ ಶಾಸಕ ರಘುಪತಿ ಭಟ್, ಉಡುಪಿ ನಗರ ಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್ ಮತ್ತು ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಹಾಗೂ ಈ ಸಮಾರಂಭದಲ್ಲಿ ಪ್ರತೀ ವರ್ಷವೂ ವಾರ್ಷಿಕೋತ್ಸವದ ದಿನದಂದು ಕೊಡಮಾಡುವ ಬಾಲವಾತ್ಸಲ್ಯ ಸಿಂಧಯ ಪಶಸ್ತಿಯನ್ನು ಈ ವರ್ಷ ಮಕ್ಕಳ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಮುರಳಿ ಕಡೆಕಾರು ಅವರಿಗೆ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕುಕ್ಕಿಕಟ್ಟೆಯ ಶ್ರೀ ಕೃಷ್ಣ ಸೇವಾಧಾಮ ಟ್ರಸ್ಟ್ ನ ಉಪಾಧ್ಯಕ್ಷ ಕಮಲಾಕ್ಷ ಅವರು ಉಪಸ್ಥಿತರಿದ್ದರು.
