ಪಡುಬಿದ್ರಿ: ಮಾರ್ಕೆಟಿಂಗ್ ಕೆಲಸಕ್ಕೆ ಸೇರಿದ ವ್ಯಕ್ತಿ ಸಂಸ್ಥೆಯ ಪಾಲುದಾರನಾಗಿ ನಕಲಿ ಬಿಲ್ ಹಾಗೂ ನಕಲಿ ಸಹಿ ತಯಾರಿಸಿ ಸಹ ಪಾಲುದಾರನಿಗೆ ಲಕ್ಷಾಂತರ ರೂ. ವಂಚನೆ – Vishwanews24
ಪಡುಬಿದ್ರಿ: ಮಾರ್ಕೆಟಿಂಗ್ ಕೆಲಸಕ್ಕೆ ಸೇರಿದ ವ್ಯಕ್ತಿ ಸಂಸ್ಥೆಯ ಪಾಲುದಾರನಾಗಿ ನಕಲಿ ಬಿಲ್ ಹಾಗೂ ನಕಲಿ ಸಹಿ ತಯಾರಿಸಿ ಸಹ ಪಾಲುದಾರನಿಗೆ ಲಕ್ಷಾಂತರ ರೂ. ವಂಚನೆ
ಪಡುಬಿದ್ರಿ : ಮಾರ್ಕೆಟಿಂಗ್ ಕೆಲಸಕ್ಕೆಂದು ಸೇರಿದ ವ್ಯಕ್ತಿ ಸಂಸ್ಥೆಯ ಪಾಲುದಾರನನ್ನಾಗಿ ಮಾಡಿಸಿಕೊಂಡು ಸಹ ಪಾಲುದಾರನಿಗೆ ಲಕ್ಷಾಂತರ ರೂ. ವಂಚಿಸಿದ್ದು ಮಾತ್ರವಲ್ಲದೆ ವಿಚಾರಿಸಿದಾಗ ಕೊಲೆ ಬೆದರಿಕೆ ಹಾಕಿರುವಾಗಿ ಪಡುಬಿದ್ರೆಯ ಶಿವರಾಜ್ ಆಚಾರ್ಯ ಅವರು ಗುರುಪ್ರಸಾದ್ ಆಚಾರ್ಯ ಎಂಬಾತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
2014 ಜುಲೈ ನಿಂದ ಶಿವರಾಜ್ ಆಚಾರ್ಯ ಅವರು ತಮ್ಮ ಅತ್ತೆ ಮಮತಾ ಪ್ರಭಾಕರ ಆಚಾರ್ಯ ಎಂಬವರೊಂದಿಗೆ ಸೇರಿ ಅಭಿಕ್ಷಾ ಗ್ರಾಫಿಕ್ಸ್ ಎಂಬ ಸಂಸ್ಥೆಯನ್ನು ಪಡುಬಿದ್ರಿಯ ಅಮೃತ ಟವರ್ಸ್ ನ ಕಟ್ಟಡದಲ್ಲಿ ನಿರ್ವಹಿಸಿಕೊಂಡು ಬರುತ್ತಿದ್ದರು. ಆದರೆ ತಮ್ಮ ಮಾವ ಪ್ರಭಾಕರ ಆಚಾರ್ಯರವರ ಮರಣಾ ನಂತರ ಶಿವರಾಜ್ ಆಚಾರ್ಯ ಇವರೇ ಸಂಸ್ಥೆಯ ವ್ಯವಹಾರಗಳನ್ನು ಮುಂದುವರಿಸಿಕೊಂಡು ಹೋಗುತ್ತಿದ್ದರು.
ಈ ನಡುವೆ 2014 ರ ಅಕ್ಟೋಬರ್ 5 ರಂದು ತಮ್ಮ ಸಂಸ್ಥೆಗೆ ಮಾರ್ಕೇಟಿಂಗ್ ಕೆಲಸಕ್ಕೆಂದು ಗುರುಪ್ರಸಾದ್ ಆಚಾರ್ಯ ಎಂಬಾತನನ್ನು ಸೇರಿಸಿಕೊಂಡಿದ್ದರು. ನಂತರ ಗುರುಪ್ರಸಾದ್ ನ ಒತ್ತಾಯದ ಮೇರೆಗೆ ಆತನನ್ನು ಪಾಲುದಾರನಾಗಿ ಸೇರಿಸಿಕೊಂಡಿದ್ದರು. ಆದರೆ ನಂತರದ ದಿನಗಳಲ್ಲಿ ಆತ ಸಂಸ್ಥೆಯ ಹೆಸರಿನಲ್ಲಿ ಶಿವರಾಜ್ ಆಚಾರ್ಯ ಇವರ ಗಮನಕ್ಕೆ ಬಾರದೇ ವಿ.ಕೆ.ಟೆಕ್ನೋಲಾಜೀಸ್ ಕಂಪ್ಯೂಟರ್ಸ್ ಮತ್ತು ಶ್ರೀ ಗಣೇಶ್ ಟ್ರೇಡರ್ಸ್ ಎಂಬ ನಕಲಿ ಸಂಸ್ಥೆಯ ಬಿಲ್ ತಯಾರಿಸಿ ಕರ್ನಾಟಕ ಬ್ಯಾಂಕ್ ಪಡುಬಿದ್ರಿ ಶಾಖೆಗೆ ನೀಡಿ 4,60,000 ರೂ. ಸಾಲವನ್ನು ಪಡೆದಿರುತ್ತಾನೆ. ಅಲ್ಲದೇ 6 ಸೆಂಟ್ಸ್ಭೂಮಿಯನ್ನು ತನ್ನ ಸ್ವಂತ ಹೆಸರಿನಲ್ಲಿ ಖರೀಧಿಸಿ ಶಿವರಾಜ್ ಆಚಾರ್ಯ ಇವರಿಗೆ ವಂಚನೆ ಮಾಡಿದ್ದಾನೆ. ಈ ಬಗ್ಗೆ ಶಿವರಾಜ್ ಆಚಾರ್ಯರವರು ವಿಚಾರಿಸಿದಾಗ ತಪ್ಪಾಯಿತು ಎಂದು ಒಪ್ಪಿಕೊಂಡದ್ದು ಮಾತ್ರವಲ್ಲದೆ 2018 ರ ಮಾ.28 ರಂದು ಶಿವರಾಜ್ ಆಚಾರ್ಯ ಅವರ ಫೋರ್ಜರಿ ಸಹಿಯನ್ನು ಮಾಡಿ ಕೆನರಾ ಬ್ಯಾಂಕ್ ಪಡುಬಿದ್ರಿ ಶಾಖೆಯಿಂದ ರೂ.50,000 ನ್ನು ತೆಗೆದು ಒಟ್ಟು 6,25,000ರೂ. ನ್ನು ಲಪಟಾಯಿಸಿದ್ದಾನೆ.
ಇಷ್ಟು ಮಾತ್ರವಲ್ಲದೇ 2020 ರ ಸೆ.11 ರಂದು ಶಿವರಾಜ್ ಆಚಾರ್ಯ ಇವರ ಫೋರ್ಜರಿ ಸಹಿ ಮಾಡಿ 1,00,000 ನ್ನು ಪಡೆದಿರುತ್ತಾನೆ. ಇಷ್ಟು ಮಾತ್ರವಲ್ಲದೇ ಆರೋಪಿಯು ತನ್ನ ಸ್ವಂತ ಲಾಭಕ್ಕೋಸ್ಕರ ಸೈಂಟ್ ಮಿಲಾಗ್ರೀಸ್ ಕ್ರೆಡಿಟ್ ಕೋಪರೇಟಿವ್ ಸೊಸೈಟಿ ಮತ್ತು ಅಡ್ವೆ ಸಹಕಾರಿ ಬ್ಯಾಂಕ್ ನಲ್ಲಿ ಸಾಲ ಪಡೆಯಲು ಯತ್ನಿಸಿ ಶಿವರಾಜ್ ಆಚಾರ್ಯ ಇವರನ್ನು ಬೆದರಿಸಿ ಸಾಲದ ಜಾಮೀನಿನ ಸಹಿ ಪಡೆದು , ಸಂಸ್ಥೆಯ ವ್ಯವಹಾರದ, ವೈಯಕ್ತಿಕ ದಾಖಲಾತಿಗಳನ್ನು ಮತ್ತು ಸಹಿ ಮಾಡಿಟ್ಟ ಚೆಕ್ಗಳನ್ನು ಕಳವು ಮಾಡಿರುತ್ತಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಹಾಗೂ ಈ ಬಗ್ಗೆ ಶಿವರಾಜ್ ಆಚಾರ್ಯ ಅವರು ಆರೋಪಿಯಲ್ಲಿ ವಿಚಾರಿಸಿದಾಗ ಆರೋಪಿಯು ಇನ್ನೊಮ್ಮೆ ವಿಚಾರಿಸಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುತ್ತಾನೆ ಎಂಬುದಾಗಿ ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
