ಪಶ್ಚಿಮ ಬಂಗಾಳದಲ್ಲಿ ವಾಸಿಸುವವರು ಬೆಂಗಾಲಿ ಮಾತನಾಡಲು ಕಲಿಯಲೇಬೇಕು : ಮಮತಾ ಬ್ಯಾನರ್ಜಿ -Vishwanews24
ಕೋಲ್ಕತಾ,: ಪಶ್ಚಿಮ ಬಂಗಾಳದಲ್ಲಿ ವಾಸಿಸುವವರು ಬೆಂಗಾಲಿ ಮಾತನಾಡಲು ಕಲಿಯಲೇಬೇಕು. ಬೆಂಗಾಲಿ ಭಾಷಿಕ ಜನರನ್ನು ಬೆಂಗಾಲಿಯೇತರರು ಗುರಿಯಾಗಿಸುವುದನ್ನು ಮುಂದುವರಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ಉತ್ತರ 24 ಪರಗಣ ಜಿಲ್ಲೆಯ ಕಂಚ್ರಪರದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಾವು ಬಂಗಾಳವನ್ನು ಮುಂದಕ್ಕೆ ತರಬೇಕಿದೆ. ನಾನು ಬಿಹಾರ, ಉತ್ತರ ಪ್ರದೇಶ, ಪಂಜಾಬ್‌ಗಳಿಗೆ ಹೋದಾಗ ಅವರ ಭಾಷೆಯನ್ನೇ ಮಾತನಾಡುತ್ತೇನೆ. ಯಾರಾದರೂ ಬಂಗಾಳದಲ್ಲಿ ವಾಸಿಸುತ್ತಿದ್ದರೆ, ಅವನು ಅಥವಾ ಅವಳು ಬೆಂಗಾಲಿ ಕಲಿಯಬೇಕು’ ಎಂದು ಹೇಳಿದರು.
‘ನಾನು ಬಿಹಾರದಲ್ಲಿ ಹಿಂದಿಯಲ್ಲಿ ಮಾತನಾಡುತ್ತೇನೆ. ಏಕೆಂದರೆ ಅದರ ಭಾಷೆ ಹಿಂದಿ. ತಮಿಳುನಾಡಿನಲ್ಲಿ ಮಾತ್ರವೇ ನಾನು ಕೆಲವು ಪದಗಳನ್ನು ತಮಿಳಿನಲ್ಲಿ ಮಾತನಾಡುತ್ತೇನೆ. ಏಕೆಂದರೆ ನನಗೆ ಆ ಭಾಷೆ ಬರುವುದಿಲ್ಲ. ನೀವು ಬಂಗಾಲದಲ್ಲಿ ವಾಸಿಸುವುದಾದರೆ ಬೆಂಗಾಲಿಯಲ್ಲಿ ಮಾತನಾಡಬೇಕು. ನೀವು ಬೇರೆ ಭಾಷೆ ಮಾತನಾಡಿದರೆ ನಮಗೇನೂ ಸಮಸ್ಯೆ ಇಲ್ಲ. ಆದರೆ ನೀವು ಬೆಂಗಾಲಿಯನ್ನೂ ಕಲಿಯಲೇಬೇಕು’ ಎಂದರು.
‘ಬಂಗಾಳದಲ್ಲಿ ಉಳಿದುಕೊಂಡು ಬೈಕ್‌ಗಳಲ್ಲಿ ಸುತ್ತಾಡುವ ಕ್ರಿಮಿನಲ್‌ಗಳನ್ನು ನಾನು ಸಹಿಸುವುದಿಲ್ಲ. ಅವರ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ. ಬಂಗಾಳಿಯೇತರ ವ್ಯಕ್ತಿಗಳು ಬೆಂಗಾಲಿ ಮಾತನಾಡುವ ಜನರನ್ನು ಗುರಿಯಾಗಿರಿಸಿಕೊಂಡರೆ ಬಂಗಾಳದ ಜನರು ಸುಮ್ಮನೆ ಇರುತ್ತಾರೆಯೇ? ಮಹಾರಾಷ್ಟ್ರ ಮತ್ತು ಗುಜರಾತ್‌ನಿಂದ ಬಿಹಾರಿಗಳನ್ನು ಹೊರಹಾಕಿದಂತೆ ನಾವು ಜನರನ್ನು ಹೊರಹಾಕಲು ಬಯಸುವುದಿಲ್ಲ. ಆದರೆ, ಬಂಗಾಳದಲ್ಲಿ ವಾಸಿಸುತ್ತಾ, ಬಂಗಾಳಿಗಳನ್ನೇ ಬೆದರಿಸುವುದನ್ನು ಎಷ್ಟು ಕಾಲ ಎಂದು ಸಹಿಸಿಕೊಳ್ಳಲು ಸಾಧ್ಯ? ನಾನು ಇದನ್ನು ಸಹಿಸುವುದಿಲ್ಲ’ ಎಂದರು.
