ಪಾಕ್‌ ಪರ ಘೋಷಣೆ ಕೂಗಿದ್ದ ಪ್ರಕರಣ : ಬಿಡುಗಡೆಗೊಂಡಿದ್ದ ಕಾಶ್ಮೀರಿ ವಿದ್ಯಾರ್ಥಿಗಳ ಮತ್ತೆ ಬಂಧನ -Vishwanews24

Featured, ರಾಜ್ಯ ನ್ಯೂಸ್

ಹುಬ್ಬಳ್ಳಿ: ಪಾಕಿಸ್ತಾನ ಪರವಾಗಿ ಘೋಷಣೆ ಕೂಗಿ ಬಂಧನಕ್ಕೊಳಗಾಗಿ ಬಿಡುಗಡೆಗೊಂಡಿದ್ದ ಮೂವರು ಕಾಶ್ಮೀರದವಿದ್ಯಾರ್ಥಿಗಳನ್ನು ಮತ್ತೆ ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿಯ ಕೆಎಲ್‌ಇ ಕಾಲೇಜಿನ ವಿದ್ಯಾರ್ಥಿಗಳನ್ನು ಭಾನುವಾರ ತಡರಾತ್ರಿ ಬಂಧಿಸಲಾಗಿದೆ.

ಕಾಶ್ಮೀರ ಮೂಲದ ವಿದ್ಯಾರ್ಥಿಗಳಾದ ಅಮಿರ್, ಬಾಸಿತ್ ಹಾಗೂ ತಾಲಿಬ್ ಎಂಬುವವರು ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದ್ದರು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು. ಇದು ವೈರಲ್ ಆದ ಬೆನ್ನಲ್ಲೇ ಹುಬ್ಬಳ್ಳಿ ಪೊಲೀಸರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದರು.

ಬಳಿಕ ಸಿಆರ್‌ಪಿಸಿ ಬಾಂಡ್‌ ಮೇಲೆ ಮೂವರು ವಿದ್ಯಾರ್ಥಿಗಳನ್ನು ಬಿಡುಗಡೆಗೊಳಿಸಲಾಗಿತ್ತು. ಆದರೆ ಪೊಲೀಸರ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.
ಕಾಂಗ್ರೆಸ್ ಮುಖಂಡರು ಕೂಡಾ ಪೊಲೀಸರ ನಡೆಯನ್ನು ಪ್ರಶ್ನಿಸಿದ್ದರು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರದ ನಡೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಅಲ್ಲದೆ ಹಲವು ಕಡೆಗಳನ್ನು ಪ್ರತಿಭಟನೆಗಳು ನಡೆದಿದ್ದವು.

ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಹುಬ್ಬಳ್ಳಿಯ ಗೋಕುಲ್ ರೋಡ್‌ ಠಾಣಾ ಪೊಲೀಸರು ಭಾನುವಾರ ತಡರಾತ್ರಿ ಮೂವರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಬಂಧಿತ ವಿದ್ಯಾರ್ಥಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ.