ಪುತ್ರನಿಗೆ ಕಿಡ್ನಿದಾನ ಮಾಡಿ ಪುನರ್ಜನ್ಮ ನೀಡಿದ 72 ವರ್ಷದ ತಾಯಿ
ಬೆಂಗಳೂರು, : ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ 72ರ ಹರೆಯದ ತಾಯಿ ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ತನ್ನ 42ರ ಹರೆಯದ ಮಗನಿಗೆ ಕಿಡ್ನಿದಾನ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ವಯೋಸಹಜ ಸಮಸ್ಯೆಗಳು ಉದ್ಭವಿಸುವ ಹಿನ್ನೆಲೆಯಲ್ಲಿ 65 ವರ್ಷದ ಬಳಿಕ ಅಂಗಾಂಗ ದಾನಕ್ಕೆ ವೈದ್ಯರು ಸಲಹೆ ನೀಡುವುದೇ ಇಲ್ಲ. ಆದರೆ 72 ವರ್ಷದ ತಾಯಿ ತನ್ನ ಮಗನಿಗೆ ಒಂದು ಕಿಡ್ನಿ ದಾನ ಮಾಡುವ ಮೂಲಕ ಹೊಸ ಜೀವನ ನೀಡಿದ್ದಾಳೆ.
ಬೆಂಗಳೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ವೈದ್ಯರ ತಂಡ ವೃದ್ಧ ತಾಯಿಯ ಮೂತ್ರಪಿಂಡವನ್ನು ಸತ್ಯನಾರಾಯಣಾಚಾರಿಗೆ ಯಶಸ್ವಿಯಾಗಿ ಕಸಿ ಮಾಡಿದ್ದಾರೆ.
ನಾವಿಬ್ಬರೂ ಒಂದು ಕಿಡ್ನಿಯಲ್ಲಿ ಬದುಕುತ್ತಿದ್ದೇವೆ. ಒಂದು ಕಿಡ್ನಿಯಲ್ಲಿ ಒಬ್ಬ ವ್ಯಕ್ತಿ ಸಾಮಾನ್ಯ ಜೀವನ ಸಾಗಿಸಬಲ್ಲ ಎಂದಾದರೆ, ಹೆಚ್ಚಾಗಿರುವ ಒಂದು ಕಿಡ್ನಿಯನ್ನು ನಾನು ನನ್ನ ಮಗನಿಗೆ ದಾನ ಮಾಡುವುದರಲ್ಲಿ ವಿಶೇಷತೆ ಏನಿದೆ? ನನ್ನ ಮಗನಿಗೆ ಕಿಡ್ನಿ ಕಸಿ ಅಗತ್ಯವಾಗಿದ್ದ ಸಮಯದಲ್ಲಿ ಈ ನಿರ್ಧಾರವೇ ಸರಿ ಎಂದೆನಿಸಿತು ಎಂದು ತಾಯಿ ಭದ್ರಕಾಳಮ್ಮ ತಿಳಿಸಿದ್ದಾರೆ.
ಈ ವಯಸ್ಸಿನಲ್ಲಿ ಸದೃಢ ಆರೋಗ್ಯ ಕಾಪಾಡಿಕೊಂಡಿರುವ ಭದ್ರಕಾಳಮ್ಮ ಇತರರಿಗೆ ಮಾದರಿ. ಈ ವಯಸ್ಸಿನಲ್ಲಿ ಕಿಡ್ನಿ ದಾನಕ್ಕೆ ಮುಂದಾಗಿರುವುದು ಅಂಗಾಂಗ ದಾನಕ್ಕೆ ಇನ್ನಷ್ಟು ಪ್ರೇರಣೆ ನೀಡುವಂತಹುದು ಎಂದು ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಮೂತ್ರಪಿಂಡಶಾಸ್ತ್ರಜ್ಞ ಡಾ. ದೀಪಕ್ ಕುಮಾರ್ ಹೇಳಿದ್ದಾರೆ.
