‘ಪ್ರಕರಣ ಸಿಬಿಐಗೆ ವಹಿಸಿದರೆ ನಾನೂ ಎಲ್ಲಾ ದಾಖಲೆ, ವಿವರಗಳನ್ನು ಬಿಚ್ಚಿಡಲು ಸಿದ್ಧನಿದ್ದೇನೆ” : ಮನ್ಸೂರ್ ಖಾನ್ -Vishwanews24
ಬೆಂಗಳೂರು: ”ನಾನು ಭಾರತಕ್ಕೆ ಬಂದು ಹೂಡಿಕೆದಾರರ ಹಣ ಹಿಂದಿರುಗಿಸಲು ಸಿದ್ಧನಿದ್ದೇನೆ. ಹಾಗೆಯೇ ಕಾನೂನು ಕ್ರಮಕ್ಕೆ ಒಳಪಡಲೂ ಸಿದ್ಧನಿದ್ದೇನೆ,” ಎಂದು ಐಎಂಎ ಮಾಲೀಕ ಮನ್ಸೂರ್ ಖಾನ್ ವಿಡಿಯೊದಲ್ಲಿ ಹೇಳಿದ್ದಾರೆ.
13 ವರ್ಷಗಳಿಂದ 21 ಸಾವಿರ ಕುಟುಂಬಗಳು ಐಎಂಎನಿಂದ ಅನ್ನ ತಿಂದಿವೆ. ದೇಶಾದ್ಯಂತ 18 ಸಾವಿರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತಾ ಬಂದಿದ್ದೇನೆ. ಸಚಿವ ಜಮೀರ್ ಅಹಮದ್ ಅವರು ‘ವಾಪಸ್ ಬಾ. ನಿನ್ನ ನೆರವಿಗೆ ನಾವಿದ್ದೇವೆ’ ಎಂದು ಹೇಳಿದ್ದನ್ನು ನೋಡಿದೆ. ಆದರೆ, ಅವರಿಂದ ನನಗೆ ಸಹಾಯ ಮಾಡಲು ಸಾಧ್ಯವೇ ಇಲ್ಲ ಎನ್ನುವುದು ನನಗೆ ಗೊತ್ತಿದೆ” ಎಂದು ಹೇಳಿದ್ದಾನೆ.
ಈ ಪ್ರಕರಣವನ್ನು ಸಿಬಿಐಗೆ ವಹಿಸಲಿ ಎಂದು ಮಾಜಿ ಸಚಿವ ಆರ್. ರೋಷನ್ಬೇಗ್ ಒತ್ತಾಯಿಸಿರುವ ಬಗ್ಗೆ ಪ್ರಸ್ತಾಪಿಸಿರುವ ಮನ್ಸೂರ್, ”ಪ್ರಕರಣ ಸಿಬಿಐಗೆ ವಹಿಸಿದರೆ ನಾನೂ ಎಲ್ಲಾ ದಾಖಲೆ, ವಿವರಗಳನ್ನು ಬ್ಲ್ಯಾಕ್ ಆಂಡ್ ವೈಟ್ ಆಗಿ ಬಿಚ್ಚಿಡಲು ಸಿದ್ಧನಿದ್ದೇನೆ” ಎಂದು ತಿಳಿಸಿದ್ದಾನೆ.
”ನನ್ನ ಬಳಿ 500 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. 120 ಕೆಜಿ ಚಿನ್ನ, 600 ಚಿನ್ನದ ಬುಲಿಯನ್ಸ್ಗಳಿದ್ದವು. ಐಎಂಎ ನಿರ್ದೇಶಕರಾದ ನಿಜಾಮುದ್ದೀನ್ ಮತ್ತು ಖಾಲಿದ್ ಅವರು ಈ ಚಿನ್ನವನ್ನೆಲ್ಲಾ ಸಾಗಿಸಿದ್ದಾರೆ. ಇವರ ವಿರುದ್ಧ ನಾನು ಕ್ರಮ ಕೈಗೊಳ್ಳಲು ಸಿದ್ಧನಿದ್ದೆ. ಆದರೆ, ಮೊದಲು ನಾನು ಬಚಾವಾಗಬೇಕಿತ್ತು. ನನ್ನಿಂದ ಯಾರಾರಯರು ಸುಲಿಗೆ, ಬ್ಲ್ಯಾಕ್ಮೇಲ್ ಮಾಡಿ ಕೋಟಿಗಟ್ಟಲೆ ಹಣ ಸುಲಿದಿದ್ದಾರೋ ಅವರಿಂದಲೇ ಹೂಡಿಕೆದಾರರು ಹೋರಾಟ ಮಾಡಿ ಹಣ ವಸೂಲಿ ಮಾಡಬೇಕು. ನಾನು ಬಾಯಿ ಬಿಟ್ಟರೆ ಮಾಧ್ಯಮಗಳಲ್ಲೂ ಐಎಂಎ ವಿರುದ್ಧ ಸುದ್ದಿ ಪ್ರಸಾರ ಆಗುವುದು ನಿಂತು ಬಿಡುತ್ತದೆ” ಎಂದೂ ವಿಡಿಯೋದಲ್ಲಿ ಹೇಳಿದ್ದಾನೆ.
ಐಎಂಎಯನ್ನು ಈ ಸ್ಥಿತಿಗೆ ತಂದವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಅವರೆಲ್ಲರಿಗೂ ಅಭಿನಂದನೆಗಳು ಎಂದಿದ್ದಾನೆ ಮನ್ಸೂರ್ .
