ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ‘ಗ್ಯಾಂಗ್‌ಸ್ಟರ್ ಗಳು : ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕ ರಾಜ್ ಬಬ್ಬರ್
ಉದಯಪುರ: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಗ್ಯಾಂಗ್ ಸ್ಟರ್ ಗಳು ಎಂದು ಕಾಂಗ್ರೆಸ್ ನಾಯಕ ರಾಜ್ ಬಬ್ಬರ್ ಹೇಳಿರುವುದು ವಿವಾದವನ್ನುಂಟು ಮಾಡಿದೆ.
ರಾಜಸ್ತಾನದ ಉದಯಪುರದಲ್ಲಿಂದು ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗುಜರಾತಿನಿಂದ ಬಂದಿರುವ ಈ ಇಬ್ಬರು ನಾಯಕರು, ಬಡ ಜನರನ್ನು ಕೊಲ್ಲುವ ಉದ್ದೇಶದಿಂದ ಗುಂಪು ಕಟ್ಟಿಕೊಂಡಿದ್ದಾರೆ ಎಂದು ಹೇಳಿದರು.
ಗುಜರಾತ್ ನ ಇಬ್ಬರು ಗ್ಯಾಂಗ್ ನಡೆಸುತ್ತಿದ್ದಾರೆ. ಇವರ ಗುರಿ ಬಡವರನ್ನು ಕೊಲ್ಲುವುದು. ಒಬ್ಬ ಗ್ಯಾಂಗ್ ಸ್ಟರ್ ಪಕ್ಷದ ಮುಖಂಡ ಎಂದು ಪರೋಕ್ಷವಾಗಿ ಶಾ ಅವರನ್ನು ಗ್ಯಾಂಗ್ ಸ್ಟರ್ ಎಂದು ಹೇಳಿದ್ದಾರೆ.
ಇನ್ನೊಬ್ಬ ಗ್ಯಾಂಗ್ ಸ್ಟರ್ ಜನರನ್ನು ವಂಚಿಸಿದ್ದಾನೆ ಮತ್ತು ಈಗ ದೇಶದ ಪ್ರಮುಖ ಹುದ್ದೆಯೊಂದರಲ್ಲಿ ಕುಳಿತುಕೊಂಡಿದ್ದಾನೆ ಎಂದು ರಾಜ್ ಬಬ್ಬರ್, ಪ್ರಧಾನಿ ಮೋದಿಗೆ ಪರೋಕ್ಷವಾಗಿ ಗ್ಯಾಂಗ್ ಸ್ಟರ್ ಪಟ್ಟ ಕಟ್ಟಿದ್ದಾರೆ.
ಕಳೆದ 23ರಂದು ರಾಜ್ ಬಬ್ಬರ್ ಅವರು ಚುನಾವಣಾ ಪ್ರಚಾರ ಭಾಷಣ ಮಾಡುತ್ತಾ, ‘ರೂಪಾಯಿ ದರ ಎಷ್ಟು ಕುಸಿಯತ್ತಿದೆ ಎಂದರೆ ಅದರ ಮೌಲ್ಯವು ಪ್ರಧಾನಿ ಮೋದಿ ಅವರ ತಾಯಿ ಹೀರಾಬೆನ್ ಅವರ ವಯಸ್ಸಿನ ಸಂಖ್ಯೆಯತ್ತ ಹೋಗುತ್ತಿದೆ’ ಎಂದು ಟೀಕಿಸಿದ್ದರು.
