ಪ್ರಧಾನಿ ಮೋದಿ ಜತೆಗೆ ಕನ್ನಡದಲ್ಲಿ ಸಂವಾದ ನಡೆಸಿದ ಪುತ್ತೂರಿನ ಕೃಷಿಕ – Vishwanews24
ಪುತ್ತೂರು:ಲೈವ್ ವೆಬ್ ಕಾಸ್ಟಿಂಗ್ ಮೂಲಕ ಕರ್ನಾಟಕರ ತುಮಕುರು ಹಾಗೂ ಪುತ್ತೂರು ರೈತರೊಡನೆ ಸಂವಾದ ನಡೆಸಿದ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರ ಮಟ್ಟರ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಚಾಲನೆ ನೀಡಿದ್ದಾರೆ.ಪುತ್ತೂರಿನ ಗೇರು ಸಂಶೋಧನಾ ಕೇಂದ್ರದಲ್ಲಿ ಪ್ರಧಾನಿಗಳ ಜತೆಗಿನ ನೇರ ಸಂವಾದ ಲೈವ್ ವೆಬ್ ಕಾಸ್ಟಿಂಗ್ ಆಯೋಜನೆ ಮೂಲಕ ಪುತ್ತೂರಿನ ಸೇಡಿಯಾಪು ಜನಾರ್ದನ್ ಭಟ್ ರಸಗೊಬ್ಬರ ಪೂರೈಕೆ ವಿಚಾರದ ಕುರಿತು ಮಾತುಕತೆ ನಡೆಸಿದ್ದಾರೆ.
ಉತ್ತರ ಪ್ರದೇಶದ ಗೋರಕ್ ಪುರದಲ್ಲಿ ನಡೆದ ಕಾರ್ಯಕ್ರಮದ ನೇರ ಪ್ರಸಾರ ದೇಶಾದ್ಯಂತ ನಡೆಯಿತು. ಇದರ ಜತೆಗೆ ಪ್ರಧಾನಿ ಅವರೊಂದಿಗೆ ಸಂವಾದವನ್ನೂ ಏರ್ಪಡಿಸಿತ್ತು. ಇದಕ್ಕಾಗಿ ಪುತ್ತೂರಿನ ಮೊಟ್ಟೆತ್ತಡ್ಕ ಗೇರು ಸಂಶೋಧನಾ ಕೇಂದ್ರದಲ್ಲಿ ಲೈವ್ ವೆಬ್ ಕಾಸ್ಟಿಂಗ್ ಆಯೋಜಿತವಾಗಿತ್ತು. ಈ ಸಂದರ್ಭ ಪುತ್ತೂರಿನ ಸೇಡಿಯಾಪು ಜನಾರ್ದನ್ ಭಟ್ ಪ್ರಧಾನಿಯೊಂದಿಗೆ ನೇರ ಮಾತುಕತೆ ನಡೆಸಿದ್ದಾರೆ.
“ನಾನೊಬ್ಬ ಗೇರು ಕೃಷಿಕ, ಬಾಳೆ, ಕಾಳುಮೆಣಸು, ಅಡಿಕೆ ಬೆಳೆಯುವ ಸಣ್ಣ ರೈತ.ನಮ್ಮ ಸುತ್ತಲೂ ಇದೇ ಬೆಳೆ ಬೆಳೆಯುವ ಅನೇಕ ಸಣ್ಣ ರೈತರಿದ್ದಾರೆ. ನೀವು ರೈತರಿಗೆ ನೆರವಾಗುವ ಅನೇಕ ಯೋಜನೆಯನ್ನು ಜಾರಿಗೆ ತಂದಿದ್ದೀರಿ.ಅದರಲ್ಲಿಯೂ ನೀಮ್ ಕೋಟಿಂಗ್ ಇರುವ ಯೂರಿಯಾ ರಸಗೊಬ್ಬರ, ಫಸಲ್ ಭೀಮಾ ಯೋಜನೆಗಳು ನಮಗೆ ಅನುಕೂಲವಾಗಿದೆ.ಈಗ ಜಾರಿಗೆ ತಂದ ಕಿಸಾನ್ ಸಮ್ಮಾನ್ ಯೋಜನೆ ಸಹ ಸಣ್ಣ ರೈತರಿಗೆ ಲಾಭ ತರಲಿದೆ.” ಎಂದು ಅವರು ಪ್ರಧಾನಿಗಳಿಗೆ ಹೇಳಿದ್ದಾರೆ.
ಪ್ರಧಾನಿ ಜತೆ ಸಂವಾದದ ನಂತರ ಸುದ್ದಿಗಾರರೊಡನೆ ಮಾತನಾಡಿದ ರೈತ ಜನಾರ್ಧನ ಭಟ್, ಪ್ರಧಾನಿ ಜೊತೆಗಿನ ಮಾತುಕತೆ ಬಗೆಗೆ ಸಂತಸ ವ್ಯಕ್ತಪಡಿಸುತ್ತಾ”ನಾನು ಕನ್ನಡದಲ್ಲೇ ಮಾತನಾಡಿದೆ. ಹಿಂದಿ ಭಾಷಾಂತರಕಾರರು ನನ್ನ ಮಾತನ್ನು ಅವರಿಗೆ ಮನವರಿಕೆ ಮಾಡಿಸಿದ್ದಾರೆ. ಕರಾವಳಿ ಭಾಗದ ಎಲ್ಲಾ ರೈತರ ಪರವಾಗಿ ಪ್ರಧಾನಿ ಜತೆ ಮಾತನಾಡಲು, ಅವರಿಗೆ ಧನ್ಯವಾದ ಹೇಳಲು ನನಗೆ ಅವಕಾಶ ದೊರಕಿದ್ದು ಸಂತಸ ತಂದಿದೆ.ಇದೊಂದು ಅವಿಸ್ಮರಣೀಯ ಕ್ಷಣ” ಎಂದಿದ್ದಾರೆ.

