ಪ್ರವೀಣ್ ಹತ್ಯೆ ಹಿನ್ನೆಲೆ – ಸರ್ಕಾರದ ಜನೋತ್ಸವ ರದ್ದು : ಸಿಎಂ ಘೋಷಣೆ -Vishwanews24
ಪ್ರವೀಣ್ ಹತ್ಯೆ ಹಿನ್ನೆಲೆ – ಸರ್ಕಾರದ ಜನೋತ್ಸವ ರದ್ದು; ಸಿಎಂ ಘೋಷಣೆ
ಬೆಂಗಳೂರು: ದಕ್ಷಿಣಕನ್ನಡದ ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿ ಸದಸ್ಯ ಪ್ರವೀಣ್ ನೆಟ್ಟಾರ್ ಕೊಲೆಯಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಸರ್ಕಾರದ ಜನೋತ್ಸವ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ. ಬುಧವಾರ ಮಧ್ಯರಾತ್ರಿ ಕರೆದ ತುರ್ತು ಸುದ್ದಿಗೋಷ್ಠಿಯಲ್ಲಿ ಸಿಎಂ ಈ ವಿಷಯ ಪ್ರಕಟಿಸಿದ್ದಾರೆ.
ಒಬ್ಬ ಅತ್ಯಂತ ಅಮಾಯಕ ಯುವಕನನ್ನು ಸಂಚಿನಿಂದ ಯೋಜನಾಬದ್ಧವಾಗಿ ಕೊಲೆ ಮಾಡಿದ್ದು ಅಮಾನವೀಯ, ಖಂಡನೀಯ. ಮಾತುಗಳಲ್ಲಲ್ಲ ಮನಸ್ಸಲ್ಲೂ ಆಕ್ರೋಶವಿದೆ. ಹರ್ಷ ಕೊಲೆ ನಡೆದ ಕೆಲವೇ ದಿನಗಳಲ್ಲಿ ಈ ಘಟನೆ ಆಗಿರುವುದು ಮನಸಿಗೆ ಘಾಸಿ ಮಾಡಿದೆ. ರಾಜ್ಯಾಧ್ಯಕ್ಷರು ಪ್ರವೀಣ್ ಮನೆಗೆ ತೆರಳಿ ಮನೆಯವರಿಗೆ ಸಮಾಧಾನ ಹೇಳಿದ್ದಾರೆ ಎಂದು ಸಿಎಂ ವಿವರಿಸಿದರು.
ಒಂದು ಕಡೆ ಕಾರ್ಯಕರ್ತನ ಕೊಲೆಯಾಗಿದೆ. ಇನ್ನೊಂದೆಡೆ ನನ್ನ ಸರ್ಕಾರಕ್ಕೆ ನಾಳೆ ಒಂದು ವರ್ಷ, ಬಿಜೆಪಿ ಸರ್ಕಾರಕ್ಕೆ ಮೂರು ವರ್ಷ ತುಂಬಲಿದೆ. ಜನೋತ್ಸವ ನಡೆಸಲಿದ್ದುದರ ಉದ್ದೇಶ ಜನಪರವಾಗಿ ಏನು ಕೆಲಸ ಮಾಡಿದ್ದೇವೆ ಅದನ್ನು ಜನತೆಗೆ ತಿಳಿಸುವುದಾಗಿತ್ತು. ಆದರೆ ಈ ಸಂದರ್ಭದಲ್ಲಿ ಜನೋತ್ಸವ ನಡೆಸದಿರಲು ತೀರ್ಮಾನಿಸಿದ್ದೇವೆ ಎಂದು ಸಿಎಂ ಹೇಳಿದರು.
ಜನರಲ್ಲಿ ಜನೋತ್ಸವದಿಂದ ಆತ್ಮವಿಶ್ವಾಸ ಮೂಡಿ ಬರುವ ದಿನಗಳಲ್ಲಿ ಭರವಸೆ ಮೂಡಿಸಲು ಉದ್ದೇಶ ಇರಿಸಿಕೊಳ್ಳಲಾಗಿತ್ತೇ ವಿನಹ ಇದು ಸಂಭ್ರಮಿಸಲು ಅಲ್ಲ. ನಾನು ಇಂದು ಇಡೀ ದಿನ ಬೇರೆ ಕಾರ್ಯಕ್ರಮಗಳಲ್ಲಿದ್ದರೂ ಮನಸಿಗೆ ಶಾಂತಿ ಇರಲಿಲ್ಲ. ಪ್ರವೀಣ್ ತಾಯಿ, ಅವರ ಮನೆಯವರು, ಹರ್ಷನ ತಾಯಿ ಆಕ್ರಂದನ ನೋಡಿ ದೊಡ್ಡಬಳ್ಳಾಪುರದ ಜನೋತ್ಸವ ಕಾರ್ಯಕ್ರಮ ಹಾಗೂ ವಿಧಾನಸೌಧದಲ್ಲಿನ ಕಾರ್ಯಕ್ರಮ ಕೂಡ ರದ್ದು ಮಾಡಿದ್ದೇವೆ. ಆದರೆ ಬಡಜನರಿಗಾಗಿ ಹಮ್ಮಿಕೊಂಡ ಕಾರ್ಯಕ್ರಮಗಳ ಕುರಿತು ಗುರುವಾರ ಸುದ್ದಿಗೋಷ್ಠಿ ಮೂಲಕ ತಿಳಿಸಲಿದ್ದೇನೆ.
