ಬಂಟ್ವಾಳ : “ಬಂಟ್ವಾಳ ಕ್ಷೇತ್ರವೊಂದನ್ನು ಬಿಜೆಪಿ ಗೆದ್ದರೆ ಇಡೀ ಜಿಲ್ಲೆಯನ್ನೇ ಗೆದ್ದಂತೆ. ಬಂಟ್ವಾಳದ ಗೆಲುವು ರಾಜ್ಯಮಟ್ಟದ ಗೆಲುವಾಗಲಿದೆ” ಎಂದು ಸಂಸದ ನಳಿನ್ ಕಟೀಲು ಹೇಳಿದ್ದಾರೆ.
ಬಂಟ್ವಾಳದಲ್ಲಿ ಪಕ್ಷದ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ ವೇಳೆ, ಸುದ್ದಿಗಾರರ ಜತೆ ಮಾತನಾಡುತ್ತಿದ್ದರು.
“ಕಳೆದು ಐದು ವರ್ಷಗಳಿಂದ ಹಿರಿಯ ಕಾಂಗ್ರೆಸ್ ನಾಯಕ ಬಿ ಜನಾರ್ದನ ಪೂಜಾರಿ ಅವರ ಮನೆಬಾಗಿಲಲ್ಲೇ ಮುಖ್ಯಮಂತ್ರಿ ಸಹಿತ ಜಿಲ್ಲೆಯ ಕೈ ನಾಯಕರು ಓಡಾಡುತ್ತಿದ್ದರೂ ಸೌಜನ್ಯಕ್ಕೆ ಒಮ್ಮೆಯಾದರೂ ಅವರ ಮನೆಗೆ ಪ್ರವೇಶಿಸದೆ ಇದೀಗ ಚುನಾವಣೆ ಬಂದ ತಕ್ಷಣ ಸಾಲು ಸಾಲಾಗಿ ಪೂಜಾರಿ ಓಲೈಸಲು ಮುಂದಾಗಿದ್ದಾರೆ” ಎಂದು ಹರಿಕೃಷ್ಣ ಬಂಟ್ವಾಳ ಎನ್ನುವ ಬಿಜೆಪಿ ಪಾಳಯದಲ್ಲಿರುವ ಪೂಜಾರಿ ಬಂಟ ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದ್ದಾರೆ.
ಜನಾರ್ದನ ಪೂಜಾರಿ ಅವರ ಕಾಲು ಹಿಡಿದ ಮಾತ್ರಕ್ಕೆ ಬಿಲ್ಲವ ಮತದಾರರು ಕೈ ಹಿಡಿಯುತ್ತಾರೆ ಎಂದು ನಂಬಿದರೆ ಅದು ಕಾಂಗ್ರೆಸ್ ನಾಯಕರ ಭ್ರಮೆಯಷ್ಟೆ ಎಂದವರು ವಾಗ್ದಾಳಿ ನಡೆಸಿದರು.
ಈ ಸಂದರ್ಭ ಪಕ್ಷ ಪ್ರಮುಖರಾದ ಕೋಟ ಶ್ರೀನಿವಾಸ ಪೂಜಾರಿ, ಸುಲೋಚನಾ ಭಟ್, ಮೋನಪ್ಪ ಭಂಡಾರಿ, ಪದ್ಮನಾಭ ಕೊಟ್ಟಾರಿ, ತುಂಗಪ್ಪ ಬಂಗೇರ, ಜಿ ಆನಂದ, ಜೀತೇಂದ್ರ ಕೊಟ್ಟಾರಿ ಮೊದಲಾದವರು ಭಾಗವಹಿಸಿದ್ದರು.
ಇದಕ್ಕೂ ಮೊದಲು ಪೊಳಲಿ ದೇವಸ್ಥಾನದಲ್ಲಿ ಪೂಜೆ ಮುಗಿಸಿದ ರಾಜೇಶ್ ನಾಯಕ್ ಸಾವಿರಾರು ಬೆಂಬಲಿಗರೊಂದಿಗೆ ಪಾದಯಾತ್ರೆ ಮೂಲಕ ಬಿ ಸಿ ರೋಡಿಗೆ ಸಾಗಿ ಬಂದರು. ಪಕ್ಷದ ಕಾರ್ಯಕರ್ತರು ಈ ಸಂದರ್ಭ ರಾಜೇಶ್ ನಾಯಕ್ ಮೇಲೆ ಪುಷ್ಪಾರ್ಚನೆಗೈದು ಹರ್ಷೋದ್ಗಾರ ನಡೆಸಿದರು.