ಬಂಟ್ವಾಳ : ಬಸ್ಸಿಗೆ ಕಾಯುತ್ತಿದ್ದ ವಿದ್ಯಾರ್ಥಿಗೆ ಚೂರಿ ಇರಿತ – vishwanews24

Featured, ದಕ್ಷಿಣ ಕನ್ನಡ

ಬಂಟ್ವಾಳ : ಬಸ್ಸಿಗೆ ಕಾಯುತ್ತಿದ್ದ ವಿದ್ಯಾರ್ಥಿಗೆ ಚೂರಿ ಇರಿತ

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇರಾ ಗ್ರಾಮದಲ್ಲಿ ಕಾಲೇಜಿಗೆ ತೆರಳಲು ಬಸ್‌ಗಾಗಿ ಕಾಯುತ್ತಿದ್ದ ಪಿಯುಸಿ ವಿದ್ಯಾರ್ಥಿನಿಯ ಮೇಲೆ ಯುವಕನೊಬ್ಬ ಚೂರಿಯಿಂದ ದಾಳಿ ನಡೆಸಿದ ಘಟನೆ ನಡೆದಿದೆ.

ಸ್ಥಳೀಯ ವ್ಯಾಪಾರಿ ಜವ್ವರ್ (28) ಎಂಬಾತ ವಿದ್ಯಾರ್ಥಿನಿಯ ಮೇಲೆ ಏಕಾಏಕಿ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಪ್ರೀತಿ ವಿಚಾರವೇ ದಾಳಿಗೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಘಟನೆಯಲ್ಲಿ ವಿದ್ಯಾರ್ಥಿನಿಯ ಕೈಗೆ ಗಾಯವಾಗಿದ್ದು, ತೀವ್ರ ರಕ್ತಸ್ರಾವಗೊಂಡ ಹಿನ್ನೆಲೆಯಲ್ಲಿ ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ದಾಳಿಯ ಬಳಿಕ ಬಸ್ ನಿಲ್ದಾಣದಲ್ಲಿ ರಕ್ತದ ಗುರುತುಗಳು ಕಂಡುಬಂದಿವೆ.

ಗಾಯಗೊಂಡ ವಿದ್ಯಾರ್ಥಿನಿ ಹಾಗೂ ಆರೋಪಿ ಇಬ್ಬರೂ ಬಂಟ್ವಾಳದ ಮೊಂತಿಮಾರ್ ಪಡ್ಪು ನಿವಾಸಿಗಳಾಗಿದ್ದಾರೆ.

ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿ ಆರೋಪಿಯ ಪತ್ತೆಗೆ ಮುಂದಾಗಿದ್ದಾರೆ.

Leave a Reply