ಬಿಜೆಪಿ ನಾಯಕರು ಮೈ ಚೌಕಿದಾರ್’ ಅಲ್ಲ, ‘ಮೈ ಪಾಗಲ್’ ಎಂದು ಘೋಷಿಸಿಕೊಳ್ಳಲಿ : ಸಿದ್ದರಾಮಯ್ಯ -Vishwanews24
ಬೆಂಗಳೂರು: ರಾಹುಲ್ ತಂದೆ ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಜೀವನವು ನಂ.1 ಭ್ರಷ್ಟಾಚಾರಿ ಎಂದೇ ಕೊನೆಗೊಂಡಿತು ಎಂದು ಪ್ರಧಾನಿ ಮೋದಿ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿ ನಾಯಕರು ‘ಮೈ ಚೌಕಿದಾರ್’ ಅಲ್ಲ ‘ಮೈ ಪಾಗಲ್’ ಎಂದು ಘೋಷಿಸಿಕೊಳ್ಳುವುದು ಒಳ್ಳೆಯದು ಎಂದಿದ್ದಾರೆ.
ಉತ್ತರಪ್ರದೇಶದ ಲಖನೌನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮೋದಿ ಮಾತನಾಡಿದ್ದರು. “ರಾಹುಲ್ ಗಾಂಧಿ ಅವರೇ ನಿಮ್ಮ ತಂದೆ ರಾಜೀವ್ ಗಾಂಧಿ 1980ರಲ್ಲಿ ಪ್ರಧಾನಿಯಾಗಿದ್ದ ಕಾಲದಲ್ಲಿ ಬೊಫೋರ್ಸ್ ಹಗರಣ ನಡೆದಿತ್ತು. ಸೈನ್ಯಕ್ಕೆ ರಕ್ಷಣಾ ಸಾಮಗ್ರಿಗಳನ್ನು ಪೂರೈಸುವ ಸ್ವೀಡಿಶ್ ಮೂಲದ ಬೊಪೋರ್ಸ್ ಕಂಪೆನಿಯಿಂದ ರಾಜೀವ್ ಗಾಂಧಿ ದೊಡ್ಡ ಮೊತ್ತದ ಹಣವನ್ನು ಕಮಿಷನ್ ರೂಪದಲ್ಲಿ ಪಡೆದಿದ್ದರು. ಈ ಮೂಲಕ ಭ್ರಷ್ಟಾಚಾರಿ ನಂ.1 ಎಂಬ ಹಣೆಪಟ್ಟಿಯೊಂದಿಗೆ ಅವರ ಬದುಕು ಅಂತ್ಯವಾಗಿತ್ತು,” ಎಂದು ಮೋದಿ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ತಾಯಿಯಂತೆಯೇ ಉಗ್ರರಿಗೆ ಬಲಿಯಾದ ರಾಜೀವ್ ಗಾಂಧಿ ಅವರ ಬಗ್ಗೆ ನೀಚತನದ ಮಾತುಗಳನ್ನಾಡುತ್ತಿರುವ ನರೇಂದ್ರ ಮೋದಿಯವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರ ಚಿಕಿತ್ಸೆಗೆ ಬೇಕಾದ ವಿಶ್ರಾಂತಿಯನ್ನು ದೇಶದ ಮತದಾರರು ಈ ಬಾರಿ ನೀಡುತ್ತಾರೆ. ಅವರು ಈ ಕಾಯಿಲೆಯಿಂದ ಶೀಘ್ರ ಗುಣಮುಖರಾಗಲಿ. ವಿನಾಶಕಾಲೇ ವಿಪರೀತ ಬುದ್ಧಿ ಎನ್ನುವಂತೆ ಆಡುತ್ತಿದ್ದಾರೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೋದಿಯಿಂದ ಹಿಡಿದು ಈಶ್ವರಪ್ಪವರೆಗೆ ಎಲ್ಲರೂ ಹತಾಶೆಯಲ್ಲಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. “ಹಿರಿಯಣ್ಣನ ಚಾಳಿ ಮನೆ ಮಂದಿಗೆಲ್ಲ ಬಂದಿದೆ. ಸೋಲಿನ ಭೀತಿಯಲ್ಲಿರುವ ಮೋದಿಯಿಂದ ಈಶ್ವರಪ್ಪನವರವರೆಗೆ ಎಲ್ಲರ ನಾಲಿಗೆಗಳಲ್ಲಿ ಈ ಹತಾಶೆ ಕಾಣಿಸುತ್ತಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ‘ಮೈ ಚೌಕಿದಾರ್’ ಅಲ್ಲ ‘ಮೈ ಪಾಗಲ್’ ಎಂದು ಬಿಜೆಪಿ ನಾಯಕರೆಲ್ಲ ಘೋಷಿಸಿಕೊಳ್ಳುವುದು ಒಳ್ಳೆಯದು,” ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ವಿನಾಶಕಾಲೇ ವಿಪರೀತ ಬುದ್ದಿ.
ತಾಯಿಯಂತೆಯೇ ಉಗ್ರರಿಗೆ ಬಲಿಯಾದ ರಾಜೀವ್ಜಿ ಬಗ್ಗೆ ನೀಚತನದ ಮಾತನಾಡುತ್ತಿರುವ @narendramodi ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರ ಚಿಕಿತ್ಸೆಗೆ ಬೇಕಾದ ವಿಶ್ರಾಂತಿಯನ್ನು ದೇಶದ ಮತದಾರರು ಈ ಬಾರಿ ನೀಡುತ್ತಾರೆ. ಅವರು ಈ ಕಾಯಿಲೆಯಿಂದ ಶೀಘ್ರ ಗುಣಮುಖರಾಗಲಿ.@INCKarnataka— Siddaramaiah (@siddaramaiah) May 6, 2019
