ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಚುನಾವಣೆ : ನಳಿನ್ ಕುಮಾರ್ ಕಟೀಲ್ ಅವಿರೋಧ ಆಯ್ಕೆ – Vishwanews24
ಬೆಂಗಳೂರು: ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಗಾಗಿ ನಡೆದ ಔಪಚಾರಿಕ ಚುನಾವಣೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇಂದು ನಗರದ ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಚೇರಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಗೆ ಔಪಚಾರಿಕ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ಅವಿರೋಧ ಆಯ್ಕೆಯಾಗಿದ್ದಾರೆ. ರಾಜ್ಯಾಧ್ಯಕ್ಷ ಚುನಾವಣಾ ವೀಕ್ಷಕರಾಗಿದ್ದ ಸಚಿವ ಸಿ.ಟಿ ರವಿ ಖುದ್ದು ನಳಿನ್ ಕುಮಾರ್ ಕಟೀಲ್ಗೆ ಪಕ್ಷದ ಧ್ವಜ ಹಸ್ತಾಂತರ ಮಾಡಿ ಅಧಿಕೃತ ಘೋಷಣೆ ಮಾಡಿದ್ದಾರೆ.
ರಾಷ್ಟ್ರೀಯ ಸಾಂಸ್ಥಿಕ ಸಹ ಚುನಾವಣಾಧಿಕಾರಿ ಸಿ.ಟಿ ರವಿ ಅವಿರೋಧ ಆಯ್ಕೆ ಘೋಷಣೆ ಮಾಡಿದರು. ನಳಿನ್ ಕುಮಾರ್ ಕಟೀಲ್ಗೆ ಪ್ರಮಾಣ ಪತ್ರ ನೀಡಿ ಅಭಿನಂದನೆ ಸಲ್ಲಿಸಲಾಯಿತು. ಇದೇ ವೇಳೆ ಬಿಜೆಪಿ ರಾಜ್ಯ ಸಾಂಸ್ಥಿಕ ಚುನಾವಣಾಧಿಕಾರಿ ಅಶ್ವಥ್ ನಾರಾಯಣ್ ಗೌಡ, ಸಹ ಚುನಾವಣಾಧಿಕಾರಿ ಹಾಲಪ್ಪ ಆಚಾರ್ ಸೇರಿದಂತೆ ಹಲವು ಶಾಸಕರು ಉಪಸ್ಥಿತರಿದ್ದರು. ಅಂದಹಾಗೆ 2020ರ ಜನವರಿ 16ರಿಂದ 2023ರ ಜನವರಿ 16ರ ತನಕ ನಳಿನ್ ಕುಮಾರ್ ಕಟೀಲ್ ಅಧಿಕಾರಾವಧಿ ಇರುತ್ತದೆ. ಪಕ್ಷದ ಸಂವಿಧಾನದ ಪ್ರಕಾರ ಚುನಾವಣೆ ಪ್ರಕ್ರಿಯೆ ನಡೆದಿದ್ದು, 2023ರ ವಿಧಾನಸಭಾ ಚುನಾವಣೆ ತನಕವೂ ಕಟೀಲ್ ರಾಜ್ಯಾಧ್ಯಕ್ಷರಾಗಿ ಮುಂದುವರಿಯುವ ಸಾಧ್ಯತೆ ಹೆಚ್ಚು.
ಪೂರ್ಣಾವಧಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ನಳಿನ್ ಕುಮಾರ್ ಕಟೀಲ್ ಸುದ್ದಿಗೋಷ್ಠಿ ನಡೆಸಿದರು. ಬಿಎಸ್ವೈ ನಂತರ ನನ್ನ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಅಮಿತ್ ಶಾ ನೇಮಕ ಮಾಡಿದರು. ಸಾಂಸ್ಥಿಕ ಚುನಾವಣೆ ಪ್ರಕ್ರಿಯೆಗಳನ್ನು ಕಳೆದ 6 ತಿಂಗಳಲ್ಲಿ ಪೂರ್ಣಗೊಳಿಸಿದ್ದೇವೆ. 264 ಮಂಡಲ ಅಧ್ಯಕ್ಷರನ್ನ ಆಯ್ಕೆ ಪ್ರಕ್ರಿಯೆ ಮುಗಿದಿದೆ. 37 ಸಾಂಸ್ಥಿಕ ಸಂಘಟನಾ ಜಿಲ್ಲೆಗಳಲ್ಲಿ 20 ಸಾಂಸ್ಥಿಕ ಸಂಘಟನಾ ಜಿಲ್ಲೆಗಳಿಗೆ ಅಧ್ಯಕ್ಷರ ನೇಮಕ ಆಗಿದೆ. ಚಾಚೂ ತಪ್ಪದೇ ಎಲ್ಲರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಕಳೆದ ವರ್ಷ ಆಗಸ್ಟ್ 27ನೇ ತಾರೀಕಿನಂದು ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಸಂಸದ ನಳಿನ್ ಕುಮಾರ್ ಅಧಿಕಾರ ಸ್ವೀಕರಿಸಿದ್ದರು. ರಾಜ್ಯ ಬಿಜೆಪಿ ಕಚೇರಿಯಲ್ಲಿ ನಳಿನ್ ಕುಮಾರ್ ಅವರಿಗೆ ಸಿಎಂ ಬಿಎಸ್ ಯಡಿಯೂರಪ್ಪ ಪಕ್ಷದ ಧ್ವಜ ಹಸ್ತಾಂತರ ಮಾಡಿ ಅಧಿಕೃತ ಘೋಷಣೆ ಮಾಡಿದ್ದರು.
