ಬಿಜೆಪಿಯ ದೊಡ್ಡ ಆಸ್ತಿ ಅನಂತ ಕುಮಾರ್ ; ಅಂತಿಮ ದರ್ಶನಕ್ಕೆ ಬೆಂಗಳೂರಿನತ್ತ ಪ್ರಧಾನಿ ಮೋದಿ ಆಗಮನ ಸಾಧ್ಯತೆ
ನವದೆಹಲಿ: ಬಹು ಅಂಗಾಂಗ ವೈಫಲ್ಯದಿಂದಾಗಿ ಕೇಂದ್ರ ಸಚಿವ ಅನಂತ್ ಕುಮಾರ್ ಅವರು ವಿಧಿವಶರಾಗಿದ್ದು, ಈ ಹಿನ್ನಲೆಯಲ್ಲಿ ಅಂತಿಮ ದರ್ಶನ ಪಡೆಯಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ..
ನನ್ನ ಸಹೋದ್ಯೋಗಿ ಮತ್ತು ಸ್ನೇಹಿತ ಶ್ರೀ ಅನಂತ್ ಕುಮಾರ್ ಜಿ ಅಗಲಿಕೆಯಿಂದ ನಾನು ತುಂಬಾ ದುಃಖಿತನಾಗಿದ್ದೇನೆ. ಅವರು ಚಿಕ್ಕ ವಯಸ್ಸಿನಲ್ಲೇ ರಾಜಕೀಯ ಜೀವನವನ್ನು ಪ್ರವೇಶಿಸಿದ್ದರು. ಅನಂತ ಕುಮಾರ್ ಅವರು ಶ್ರದ್ಧೆ ಮತ್ತು ಸಹಾನುಭೂತಿಯಿಂದ ಸಮಾಜಕ್ಕೆ ಸೇವೆ ಸಲ್ಲಿಸಿದ್ದಾರೆ ಎಂದು ಬೇಸರದಿಂದ ಪ್ರಧಾನಿ ಮೋದಿ ಹೇಳಿಕೊಂಡಿದ್ದಾರೆ..
“ಅನಂತ ಕುಮಾರ್ ಜೀ ಅವರು ಒಬ್ಬ ಸಮರ್ಥ ಆಡಳಿತಾಧಿಕಾರಿಯಾಗಿದ್ದು, ಅನೇಕ ಸಚಿವ ಖಾತೆಗಳನ್ನು ನಿರ್ವಹಿಸಿದ್ದರು. ಬಿಜೆಪಿ ಸಂಘಟನೆಗೆ ದೊಡ್ಡ ಆಸ್ತಿಯಾಗಿದ್ದು, ಅವರು ಕರ್ನಾಟಕದಲ್ಲಿ ವಿಶೇಷವಾಗಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಕ್ಷವನ್ನು ಬಲಪಡಿಸಲು ಕಠಿಣ ಶ್ರಮ ಪಟ್ಟಿದ್ದರು.” ಎಂದು ಅವರ ಬಗ್ಗೆ ಹೇಳಿದ್ದಾರೆ.
ಇಂದು ಬೆಳಿಗ್ಗೆ 10.30ರ ಸುಮಾರಿಗೆ ವಿಶೇಷ ವಿಮಾನದ ಮೂಲಕ ಪ್ರಧಾನಿ ಮೋದಿಯವರು ಬೆಂಗಳೂರಿಗೆ ಆಗಮಿಸಲಿದ್ದು, ಅಂತಿಮ ದರ್ಶನ ಪಡೆಯಲಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ. ಆದರೆ, ಈ ಕುರಿತು ಪ್ರಧಾನಿಮಂತ್ರಿಗಳ ಕಾರ್ಯಾಲಯ ಅಧಿಕೃತ ಮಾಹಿತಿಗಳನ್ನು ಘೋಷಣೆ ಮಾಡಿಲ್ಲ.
