ಬಿಜೆಪಿಯ ಮತ್ತೊಂದು ವಿಕೆಟ್ ಪತನ: ರಾಜೀನಾಮೆ ಘೋಷಿಸಿದ ಆಯನೂರು ಮಂಜುನಾಥ್ – Vishwanews24
ಬಿಜೆಪಿಯ ಮತ್ತೊಂದು ವಿಕೆಟ್ ಪತನ: ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ಘೋಷಿಸಿದ ಆಯನೂರು ಮಂಜುನಾಥ್
ಶಿವಮೊಗ್ಗ: ಕರ್ನಾಟಕ ವಿಧಾನಸಭೆ ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಪಕ್ಚಾಂತರ ಪರ್ವ ಜೋರಾಗಿದೆ. ಈಗಾಗಲೇ ಬಿಜೆಪಿ ಇಬ್ಬರು ಹಾಲಿ ವಿಧಾನಪರಿಷತ್ ಸದಸ್ಯರು ಹಾಗೂ ಓರ್ವ ಶಾಸಕ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ಬಿಜೆಪಿ ಮತ್ತೊಂದು ವಿಕೆಟ್ ಪತನವಾಗಿದೆ. ಶಿವಮೊಗ್ಗ ನಗರ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.
ಶಿವಮೊಗ್ಗದಲ್ಲಿ ಇಂದು (ಏಪ್ರಿಲ್ 03) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯನೂರು ಮಂಜುನಾಥ್, ಸದ್ಯದಲ್ಲೇ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ. ನಾನು ಬಡವರ ಪ್ರತಿನಿಧಿಯಾಗಿ ಶಿವಮೊಗ್ಗದಲ್ಲಿ ಸ್ಪರ್ಧೆ ಮಾಡುತ್ತೇನೆ. ಈ ಮೂಲಕ ಮಾಜಿ ಸಚಿವ ಈಶ್ವರಪ್ಪ ಸವಾಲನ್ನು ನಾನು ಸ್ವೀಕಾರ ಮಾಡಿದ್ದೇನೆ. ನನ್ನನ್ನ ಚುನಾವಣಾ ಕಣದಲ್ಲಿ ಎದುರಿಸಿ ಎಂದು ಈಶ್ವರಪ್ಪಗೆ ಸವಾಲು ಹಾಕಿದರು. ಈ ಮೂಲಕ ಈ ಬಾರಿಯ ಶಿವಮೊಗ್ಗ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಖಚಿತಪಡಿಸಿದರು.
ಈ ಬಾರಿ ವಿಧಾನಸಭೆಗೆ ಕಣಕ್ಕಿಳಿಯಲೇಬೇಕು ಎಂಬ ಇಚ್ಚೆಯಿಂದ ಸಾರ್ವತ್ರಿಕವಾಗಿ ಹೇಳಿದ್ದೇನೆ. ಪಕ್ಷದ ವೇದಿಕೆಯಲ್ಲಿಯೂ ನನ್ನ ವಿನಂತಿ ಮಾಡಿಕೊಂಡಿದ್ದೇನೆ. ನನ್ನ ಪ್ರಯತ್ನಕ್ಕೆ ಪೂರಕವಾಗಿ ಬಿಜೆಪಿಯಲ್ಲಿ ಟಿಕೆಟ್ ಸಿಗಬಹುದು ಎಂಬ ಲಕ್ಷಣಗಳು ಕಂಡು ಬಂದಿಲ್ಲ. ಆದರೆ ಕೆಲವರ ಮಕ್ಕಳ ಹೆಸರುಗಳು ಓಡಾಡುತ್ತಿವೆ. ಮೊನ್ನೆ ಈಶ್ವರಪ್ಪ ಹೇಳಿದ ಮಾತನ್ನು ಗಂಭೀರವಾಗಿ ಪರಿಗಣಿಸಿ ಒಂದು ನಿರ್ಧಾರಕ್ಕೆ ಬಂದಿದ್ದೇನೆ. ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ತೀರ್ಮಾನಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.
