ಬ್ಯಾನರ್ ಹಾಕಲು ಅವಕಾಶ ಮಾಡಿಕೊಡಬೇಡಿ, ಬ್ಯಾನರ್ ಸಂಸ್ಕೃತಿಯನ್ನ ಕಿತ್ತೊಗೆಯಿರಿ : ಪ್ರಧಾನಿಗೆ ಕಮಲ್ ಹಾಸನ್ ಮನವಿ -Vishwanews24
ಚೆನ್ನೈ: ನಟ ಕಮ್ ರಾಜಕಾರಣಿ ಕಮಲ್ ಹಾಸನ್, ಪ್ರಧಾನಿ ಮೋದಿ ಅವರಿಗೊಂದು ಮನವಿ ಮಾಡಿದ್ದಾರೆ. ಇತ್ತೀಚೆಗಷ್ಟೇ ತಮಿಳುನಾಡಿನಲ್ಲಿ ಯುವತಿಯೊಬ್ಬರ ಮೇಲೆ ಬ್ಯಾನರ್ ಬಿದ್ದು, ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಬ್ಯಾನರ್ ಸಂಸ್ಕೃತಿ ಬಗ್ಗೆ ಸಿಡಿದೆದ್ದಿರುವ ಕಮಲ್ ಹಾಸನ್, ಬ್ಯಾನರ್ ಹಾಕಲು ಅವಕಾಶ ಮಾಡಿಕೊಡಬೇಡಿ, ಬ್ಯಾನರ್ ಸಂಸ್ಕೃತಿಯನ್ನ ಕಿತ್ತೊಗೆಯಿರಿ ಅಂತ ಪ್ರಧಾನಿಗೆ ಮನವಿ ಮಾಡಿದ್ದಾರೆ.
ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಮುಂದಿನ ವಾರ ತಮಿಳುನಾಡಿನ ಐತಿಹಾಸಿಕ ನಗರ ಮಹಾಬಲಿಪುರಂಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಪ್ರಧಾನಿ ಮೋದಿಯವರ ಜೊತೆ ಅನೌಪಚಾರಿಕ ಸಭೆ ನಡೆಸಲಿದ್ದಾರೆ. ಈ ಇಬ್ಬರು ನಾಯಕರ ಭೇಟಿ ವೇಳೆ ಬ್ಯಾನರ್ ಹಾಕಲು ಅವಕಾಶ ಮಾಡಿಕೊಡಿ ಅಂತ ತಮಿಳುನಾಡು ಸರ್ಕಾರ, ಹೈಕೋರ್ಟ್ ಮೆಟ್ಟಿಲೇರಿದೆ.
ಬ್ಯಾನರ್ ಸಂಸ್ಕೃತಿಯನ್ನ ಕೊನೆಗೊಳಿಸಲು ಮೊದಲ ಹೆಜ್ಜೆ ಇಡುವಲ್ಲಿ ನೀವು ಮೊದಲಿಗರಾಗಿ ಕಾರ್ಯ ನಿರ್ವಹಿಸಿದರೆ, ಅದು ತಮಿಳರ ಭಾವನೆಗಳ ಬಗ್ಗೆ ನಿಮ್ಮ ಕಾಳಜಿಯನ್ನು ಪ್ರತಿಬಿಂಬಿಸುತ್ತದೆ. ಜೊತೆಗೆ ಅದು ನಿಮಗೆ ದೊಡ್ಡ ಪ್ರಚಾರವನ್ನು ಕೊಡುತ್ತದೆ ಅಂತಾ ಕಮಲ್ ಹಾಸನ್ ಟ್ವೀಟ್ ಮಾಡಿದ್ದಾರೆ.
