ಬ್ರಿಟನ್‌ನಲ್ಲಿ ಹೊಸ ಮಾದರಿಯ ಕೊರೊನಾ ವೈರಸ್ : ಬ್ರಿಟನ್‌ನಿಂದ ಭಾರತಕ್ಕೆ ಬರುವ ವಿಮಾನಗಳ ಸ್ಥಗಿತ -Vishwanews24
ಬ್ರಿಟನ್‌ನಲ್ಲಿ ಹೊಸ ಮಾದರಿಯ ಕೊರೊನಾ ವೈರಸ್ : ಬ್ರಿಟನ್‌ನಿಂದ ಭಾರತಕ್ಕೆ ಬರುವ ವಿಮಾನಗಳ ಸ್ಥಗಿತ -Vishwanews24
ನವದೆಹಲಿ:ಬ್ರಿಟನ್ ನಲ್ಲಿ ರೂಪಾಂತರಗೊಂಡ ನೂತನ ವೈರಸ್ ಕ್ಷಿಪ್ರವಾಗಿ ಹರಡುತ್ತಿರುವುದರಿಂದ ಭಾರತ ಮುಂಜಾಗ್ರತಾ ಕ್ರಮವಾಗಿ ಬ್ರಿಟನ್ ನಿಂದ ಆಗಮಿಸುವ ಎಲ್ಲಾ ವಿಮಾನಗಳಿಗೆ ಡಿಸೆಂಬರ್ 31ರವರೆಗೆ ನಿರ್ಬಂಧ ವಿಧಿಸಿರುವುದಾಗಿ ವರದಿ ತಿಳಿಸಿದೆ.
ಬ್ರಿಟನ್ ನಲ್ಲಿ ಕೋವಿಡ್ ಹೊಸ ಪ್ರಬೇಧ ಕ್ಷಿಪ್ರವಾಗಿ ಹರಡುತ್ತಿದ್ದು, ದೇಶದಲ್ಲಿ ಹೆಚ್ಚಿನ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಯುಕೆಯಿಂದ ಭಾರತಕ್ಕೆ ಬರುವ ಎಲ್ಲಾ ವಿಮಾನ ಸಂಚಾರವನ್ನು ಡಿಸೆಂಬರ್ 31ರವರೆಗೂ ನಿಷೇಧಿಸಲು ನಿರ್ಧಾರ ಕೈಗೊಂಡಿರುವುದಾಗಿ ಭಾರತ ಹೇಳಿದೆ.
ಭಾರತದಿಂದ ಬ್ರಿಟನ್ ಗೆ ತೆರಳುವ ವಿಮಾನ ಸಂಚಾರವನ್ನೂ ಕೂಡಾ ಈ ಸಂದರ್ಭದಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಬ್ರಿಟನ್ ನಿಂದ ನಾಳೆ ಮಧ್ಯರಾತ್ರಿ ಭಾರತಕ್ಕೆ ಆಗಮಿಸಲಿರುವ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ಆರ್ ಟಿ-ಪಿಸಿಆರ್ ಪರೀಕ್ಷೆ ನಡೆಸಲಾಗುವುದು ಎಂದು ವಿವರಿಸಿದೆ.
“ಬ್ರಿಟನ್‌ನಲ್ಲಿರುವ ಸದ್ಯದ ಪರಿಸ್ಥಿತಿಯನ್ನು ಪರಿಗಣಿಸಿ, ಅಲ್ಲಿಂದ ಭಾರತಕ್ಕೆ ಬರುವ ಎಲ್ಲಾ ವಿಮಾನಗಳನ್ನು ಡಿಸೆಂಬರ್ 31ರ ರಾತ್ರಿ 11.59ರವರೆಗೆ ತಾತ್ಕಾಲಿಕವಾಗಿ ರದ್ದುಗೊಳಿಸಲು ಭಾರತ ಸರಕಾರ ನಿರ್ಧರಿಸಿದೆ. ಡಿಸೆಂಬರ್ 22ರ ರಾತ್ರಿ 11.59ರಿಂದ ಈ ನಿಷೇಧ ಅನ್ವಯವಾಗಲಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಹೇಳಿದೆ.
ಬ್ರಿಟನ್ ನಲ್ಲಿ ಪತ್ತೆಯಾಗಿರುವ ಈ ಹೊಸ ವಿಧದ ವೈರಸ್ ಕುರಿತು ಕೇಂದ್ರ ಸರ್ಕಾರ ಎಚ್ಚರಿಕೆ ವಹಿಸಿದೆ. ಯಾರೂ ಭಯ ಪಡುವ ಅಗತ್ಯವಿಲ್ಲ. ಸರ್ಕಾರ ಮುಂಜಾಗ್ರತೆಯಿಂದ ಕೆಲಸ ಮಾಡುತ್ತಿದೆ. ಕಳೆದ ಒಂದು ವರ್ಷದಲ್ಲಿ, ನೀವೇ ಕಂಡಂತೆ ಜನರ ರಕ್ಷಣೆಗೆ ಸಂಬಂಧಿಸಿದಂತೆ ಸರ್ಕಾರ ಸಾಕಷ್ಟು ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ. ಆತಂಕ ಪಡುವುದರಲ್ಲಿ ಯಾವುದೇ ಅರ್ಥವಿಲ್ಲ” ಎಂದು ತಿಳಿಸಿದ್ದಾರೆ.
