ಭಯೋತ್ಪಾದನೆ ಎದುರಿಸಲು, ಉಗ್ರರ ವಿರುದ್ಧದ ಹೋರಾಟಕ್ಕೆ ಎಲ್ಲ ರೀತಿಯ ಸಹಕಾರ : ಸೌದಿ ಅರೇಬಿಯಾ – Vishwanews24

Featured, ರಾಷ್ಟ್ರ ನ್ಯೂಸ್

ನವದೆಹಲಿ: ಭಯೋತ್ಪಾದನೆ ಹಾಗೂ ತೀವ್ರಗಾಮಿತನ ಸರ್ವವ್ಯಾಪಿಯಾಗಿದ್ದು, ಇವುಗಳನ್ನು ಎದುರಿಸಲು ಭಾರತ ಹಾಗೂ ನೆರೆ ದೇಶಗಳಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಸೌದಿ ಅರೇಬಿಯಾದ ರಾಜಕುಮಾರ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಭರವಸೆ ನೀಡಿದ್ದಾರೆ.

ಪಾಕಿಸ್ತಾನ ಪ್ರವಾಸ ಮುಗಿಸಿ ಮಂಗಳವಾರ ರಾತ್ರಿ ಭಾರತಕ್ಕೆ ಆಗಮಿಸಿದ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಬುಧವಾರ ಮೋದಿ ಜತೆ ವಿಸ್ತೃತ ಮಾತುಕತೆ ನಡೆಸಿದರು. ವ್ಯಾಪಾರ ಹಾಗೂ ಹೂಡಿಕೆ ವಲಯಗಳಲ್ಲಿ ಸಹಕಾರ ವೃದ್ಧಿಸುವುದಕ್ಕೆ ಸಂಬಂಧಿಸಿದಂತೆ 5 ಒಪ್ಪಂದಗಳಿಗೆ ಇದೇ ವೇಳೆ ಎರಡೂ ದೇಶಗಳು ಸಹಿ ಹಾಕಿದವು.

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋದಿ, ಸೌದಿ ಅರೇಬಿಯಾದೊಂದಿಗೆ ದ್ವಿಪಕ್ಷೀಯ ಸಂಬಂಧವನ್ನು ಗಟ್ಟಿಗೊಳಿಸುವ ಸಂಬಂಧ ಮಾತುಕತೆ ನಡೆಸಲಾಯಿತು. ರಕ್ಷಣಾ ವಲಯದಲ್ಲಿ ಪರಸ್ಪರ ಸಹಕಾರಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಸೌದಿ ಅರೇಬಿಯಾ ಮತ್ತು ಭಾರತದ ನಡುವಿನ ಸಂಬಂಧ ಸಾಕಷ್ಟು ಗಟ್ಟಿಗೊಂಡಿದೆ. ಭಾರತದ ಮೂಲಸೌಕರ್ಯ ವಲಯದಲ್ಲಿ ಸೌದಿ ಅರೇಬಿಯಾ ಹೂಡಿಕೆ ಮಾಡಲು ಒಪ್ಪಿಗೆ ಸೂಚಿಸಿರುವುದನ್ನು ನಾನು ಸ್ವಾಗತಿಸುತ್ತೇನೆ ಎಂದು ತಿಳಿಸಿದರು.

ಮಾತುಕತೆ ಬಳಿಕ ಮಾಧ್ಯಮ ಹೇಳಿಕೆಯೊಂದನ್ನು ಸೌದಿ ರಾಜಕುಮಾರ ಬಿಡುಗಡೆ ಮಾಡಿದ್ದಾರೆ. ಭಯೋತ್ಪಾದನೆ ಹಾಗೂ ತೀವ್ರಗಾಮಿತನಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಎಲ್ಲ ಸಹಕಾರ ನೀಡುತ್ತೇವೆ. ಅದು ಗುಪ್ತಚರ ಮಾಹಿತಿ ವಿನಿಮಯ ಕೂಡ ಆಗಿರಬಹುದು. ಆದರೆ ಭಾರತವೊಂದರ ಜತೆಗೇ ಅಲ್ಲ, ನೆರೆ ದೇಶಗಳಿಗೂ ಸಹಾಯ ಮಾಡುತ್ತೇವೆ ಎಂದು ಹೇಳಿದರು.