ಭಾರತ ವಿರುದ್ಧದ ಪಂದ್ಯದಲ್ಲಿ ಜಯ ಸಾಧಿಸಿ ತಮ್ಮ ಅಭಿಯಾನ ಅಂತ್ಯಗೊಳಿಸುವ ನಂಬಿಕೆ ನಮ್ಮದು : ಲಂಕಾ ಆಫ್ ಸ್ಪಿನ್ನರ್ ಡಿ’ಸಿಲ್ವ -Vishwanews24
ಲಂಡನ್: ಶ್ರೀಲಂಕಾ ಈಗಾಗಲೇ ವಿಶ್ವ ಕಪ್ನಿಂದ ಹೊರ ಬಿದ್ದಿರಬಹುದು. ಆದರೆ ಶನಿವಾರ ನಡೆಯುವ ಭಾರತ ವಿರುದ್ಧದ ಪಂದ್ಯದಲ್ಲಿ ಜಯ ಸಾಧಿಸಿ ತಮ್ಮ ಅಭಿಯಾನ ಅಂತ್ಯಗೊಳಿಸುವ ನಂಬಿಕೆ ನಮ್ಮದು ಎಂದು ತಂಡದ ಆಫ್ ಸ್ಪಿನ್ನರ್ ಧನಂಜಯ ಡಿ’ಸಿಲ್ವ ಹೇಳಿದ್ದಾರೆ.
ಸೋಮವಾರ ನಡೆದ ಪಂದ್ಯದಲ್ಲಿ ಶ್ರೀಲಂಕಾ ತಂಡವು ಬೃಹತ್ ಮೊತ್ತದ ಸೆಣಸಾಟದಲ್ಲಿ ವೆಸ್ಟ್ಇಂಡೀಸ್ ತಂಡ ವನ್ನು 23 ರನ್ನುಗಳಿಂದ ಸೋಲಿಸಿ ಸಮಾಧಾನಪಟ್ಟುಕೊಂಡಿದೆ. ಈ ಮೊದಲು ಇದೇ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾವು ದಕ್ಷಿಣ ಆಫ್ರಿಕಾಕ್ಕೆ 9 ವಿಕೆಟ್ಗಳಿಂದ ಶರಣಾಗಿತ್ತು.
ಇದು ಈ ವಿಶ್ವಕಪ್ನಲ್ಲಿ ಶ್ರೀಲಂಕಾದ 3ನೇ ಗೆಲುವು ಆಗಿದೆ. ಇಂಗ್ಲೆಂಡನ್ನು ಸದೆಬಡಿದಿದ್ದ ಶ್ರೀಲಂಕಾ ತಂಡವು ಹೆಡಿಂಗ್ಲೆಯಲ್ಲಿ ವಿರಾಟ್ ಕೊಹ್ಲಿ ಪಡೆಯನ್ನು ಉರುಳಿಸಲು ಎದುರು ನೋಡುತ್ತಿದೆ ಎಂದು ಡಿ’ಸಿಲ್ವ ತಿಳಿಸಿದ್ದಾರೆ.
ಐಸಿಸಿಯ ಇತರ ಕೂಟಗಳಲ್ಲಿ ನಾವು ಭಾರತ ವಿರುದ್ಧ ಉತ್ತಮ ನಿರ್ವಹಣೆ ದಾಖಲಿಸಿದ್ದೇವೆ. ನಾವು ಈಗಷ್ಟೇ ವಿಂಡೀಸ್ ತಂಡವನ್ನು ಸೋಲಿಸಿದ್ದೇವೆ. ಅದೇ ಉತ್ಸಾಹದಲ್ಲಿ ಆಡಿದರೆ ಭಾರತವನ್ನು ಮತ್ತೆ ಸೋಲಿಸಲು ಸಾಧ್ಯ ಎಂದು ಡಿ’ಸಿಲ್ವ ತಿಳಿಸಿದರು.
ಪ್ರತಿಯೊಂದು ಪಂದ್ಯವನ್ನು ಗೆಲ್ಲಲು ನಾವು ಪ್ರಯತ್ನಿಸಿದ್ದೇವೆ. ಒಂದು ವೇಳೆ ಭಾರತ ತಂಡವನ್ನು ಸೋಲಿಸಿದರೆ ನಾವು 5ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಲಿದ್ದೇವೆ ಎಂದು ಡಿ’ಸಿಲ್ವ ವಿವರಿಸಿದರು.
