ಭಾರತದ ಪ್ರಧಾನಿ ಮೋದಿ ನನ್ನ ಪ್ರೀತಿಯ ಸ್ನೇಹಿತ, ಅವರೆಂದರೆ ನನಗಿಷ್ಟ’ , ಮೋದಿಯನ್ನು ಕೊಂಡಾಡಿದ ಟ್ರಂಪ್
ವಾಷಿಂಗ್ಟನ್: ಭಾರತದ ಪ್ರಧಾನಿ ನರೇಂದ್ರ ಮೋದಿ ನನ್ನ ಪ್ರೀತಿಯ ಸ್ನೇಹಿತ. ನಾನು ಅವರನ್ನು ತುಂಬ ಇಷ್ಟಪಡುತ್ತೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾಗಿ ಪತ್ರಕರ್ತ ಬಾಬ್ವುಡ್ವಾರ್ಡ್ ಎಂಬುವರು ತಮ್ಮ ಇತ್ತೀಚಿಗಿನ ಪುಸ್ತಕ ‘ಫಿಯರ್: ಟ್ರಂಪ್ ಇನ್ ದಿ ವೈಟ್ ಹೌಸ್’ನಲ್ಲಿ ಉಲ್ಲೇಖಿಸಿದ್ದಾರೆ.
ಟ್ರಂಪ್ ಅವರು ಕಳೆದ ವರ್ಷದ ಜುಲೈ 19ರಂದು ನಡೆದ ಸಭೆಯಲ್ಲಿ ಮೋದಿಯರವನ್ನು ಹೊಗಳಿದ್ದಾರೆ. ಅದಕ್ಕೂ ಮೊದಲು ಜೂ.26ರಂದು ವೈಟ್ಹೌಸ್ನಲ್ಲಿ ಭಾರತದ ಪ್ರಧಾನಿ ಜತೆ ದೀರ್ಘ ಚರ್ಚೆ ನಡೆಸಿದ್ದರು. ” ಅಮೆರಿಕಕ್ಕೆ ಅಫ್ಘಾನಿಸ್ತಾನದಿಂದ ಏನೂ ಸಹಾಯವಾಗುತ್ತಿಲ್ಲ. ಆದರೂ ಅಲ್ಲಿನ ಶಾಂತಿ ಸ್ಥಾಪನೆಗೆ ಪ್ರಯತ್ನಿಸುತ್ತದೆ. ಅಫ್ಘಾನಿಸ್ತಾನದಲ್ಲಿ ಅಪಾರ ಖನಿಜ ಸಂಪತ್ತು ಇದೆ. ಆದರೆ ಅದರಿಂದ ಯುಎಸ್ಗೆ ಉಪಯೋಗವಾಗುತ್ತಿಲ್ಲ. ಅದನ್ನು ಬಳಸಿಕೊಳ್ಳಬೇಕು ಎಂದು ಮೋದಿ ನನಗೆ ಹೇಳಿದ್ದರು. ಅವರ ಈ ಮಾತು ನನಗೆ ಇಷ್ಟವಾಗಿದೆ” ಎಂದು ಟ್ರಂಪ್ ಹೇಳಿದ್ದರು ಎಂದು ಪುಸ್ತಕದಲ್ಲಿ ಬರೆದಿದ್ದಾರೆ.
ಅಫ್ಘಾನಿಸ್ತಾನದಿಂದ ಯುಎಸ್ಗೆ ನಷ್ಟವೇ ಆಗುತ್ತಿದೆ. ಇದೊಂದು ದುರಂತ. ಈ ವಿಚಾರದಲ್ಲಿ ನಮ್ಮ ಮಿತ್ರರೂ ಸಹಾಯ ಮಾಡುತ್ತಿಲ್ಲ. ಪಾಕಿಸ್ತಾನವೂ ನಮ್ಮ ಹಿತೈಷಿಗಳಲ್ಲ ಎಂದು ಟ್ರಂಪ್ ಹೇಳಿದ್ದಾಗಿ ಪತ್ರಕರ್ತ ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ.
